ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

CRPFನಲ್ಲಿ ಅಡುಗೆ ಸಿಬ್ಬಂದಿಗೆ ಬಡ್ತಿ: 85 ವರ್ಷಗಳ ಇತಿಹಾಸದಲ್ಲಿಯೇ ಮೊದಲು

Published 6 ಜೂನ್ 2024, 14:17 IST
Last Updated 6 ಜೂನ್ 2024, 14:17 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿನ (ಸಿಆರ್‌ಪಿಎಫ್‌) ಅತ್ಯಂತ ಕೆಳಹಂತದ ಹುದ್ದೆಗಳಾದ ಅಡುಗೆಯವರು ಮತ್ತು ನೀರು ನಿರ್ವಾಹಕರುಗಳಿಗೆ (ವಾಟರ್‌ ಕ್ಯಾರಿಯರ್‌) ಇದೇ ಮೊದಲ ಬಾರಿಗೆ ಬಡ್ತಿ ನೀಡಲಾಗಿದೆ. ಈ ಹುದ್ದೆಗಳಲ್ಲಿನ 2,600 ಸಿಬ್ಬಂದಿ ಪದೋನ್ನತಿ ಆದೇಶ ಪಡೆದಿದ್ದಾರೆ.

ಸಿಆರ್‌ಪಿಎಫ್‌ನ 85 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಹುದ್ದೆಯ ಸಿಬ್ಬಂದಿಗೆ ಬಡ್ತಿ ಸಿಕ್ಕಿದೆ.

1939ರಲ್ಲಿ ರಚನೆಯಾದ ಸಿಆರ್‌ಪಿಎಫ್‌ ಪಡೆಗಳಲ್ಲಿ ಸದ್ಯ 3.25 ಲಕ್ಷ ಪುರುಷ ಮತ್ತು ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಆರ್‌ಪಿಎಫ್‌ನ ಅಡುಗೆ ಮನೆಗಳು, ಕ್ಯಾಂಟೀನ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಕಾರ್ಯಗಳ ಜಾಲವನ್ನು ನಿರ್ವಹಿಸುವ 12,250 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

1,700 ಅಡುಗೆಯವರು ಮತ್ತು 900 ನೀರು ನಿರ್ವಾಹಕ ಸಿಬ್ಬಂದಿಯನ್ನು ಅವರ ಕಾನ್‌ಸ್ಟೆಬಲ್‌ ಹುದ್ದೆಯಿಂದ ಹೆಡ್‌ ಕಾನ್‌ಸ್ಟೆಬಲ್‌ ಶ್ರೇಣಿಗೆ ಬಡ್ತಿ ನೀಡಿ ಬುಧವಾರ ಆದೇಶ ಹೊರಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬ್ರಿಟಿಷರ ಕಾಲದಲ್ಲಿ 1939ರಲ್ಲಿ ಸಿಆರ್‌ಪಿಎಫ್‌ ರಚನೆಯಾಗಿದೆ. ಅಂದಿನಿಂದಲೂ ಅಡುಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸಿಆರ್‌ಪಿಎಫ್‌ನ ಭಾಗವಾಗಿದ್ದಾರೆ. 2016ರಲ್ಲಿ ಕೇಂದ್ರ ಸರ್ಕಾರ 7ನೇ ವೇತನ ಆಯೋಗ ಜಾರಿಗೊಳಿಸಿದಾಗ ಈ ಸಿಬ್ಬಂದಿಗೆ ಅಡುಗೆಯವರು ಮತ್ತು ನೀರು ನಿರ್ವಾಹಕರು ಎಂಬ ನಿರ್ದಿಷ್ಟ ಕೇಡರ್‌ನ್ನು ಹೆಸರಿಸಿತು ಎಂದು ಅವರು ವಿವರಿಸಿದರು.

ಸಿಆರ್‌ಪಿಎಫ್‌ನಲ್ಲಿ ಈ ಕೆಳ ಶ್ರೇಣಿಯಲ್ಲಿ ನೇಮಕಗೊಂಡವರಿಗೆ ಈ ಮೊದಲು ಯಾವುದೇ ಬಡ್ತಿ ನೀಡಲಾಗುತ್ತಿರಲಿಲ್ಲ. ಸುಮಾರು 30ರಿಂದ 35 ವರ್ಷಗಳವರೆಗೆ ಒಂದೇ ಶ್ರೇಣಿಯಲ್ಲಿ ಸೇವೆ ಸಲ್ಲಿಸಿ, ಅದೇ ಶ್ರೇಣಿಯಲ್ಲಿ ನಿವೃತ್ತರಾಗಬೇಕಿತ್ತು. ಪ್ರತಿ ಸಿಆರ್‌ಪಿಎಫ್‌ ಬೆಟಾಲಿಯನ್‌ನಲ್ಲಿ ಈ ಕಾರ್ಯ ನಿರ್ವಹಿಸುವ 45 ಸಿಬ್ಬಂದಿ ಇರುತ್ತಾರೆ ಎಂದು ಅವರು ಹೇಳಿದರು. 

ಈ ಸಿಬ್ಬಂದಿಗೆ ಬಡ್ತಿ ನೀಡುವ ಕುರಿತ ಸಿಆರ್‌ಪಿಎಫ್‌ ಸಿದ್ಧಪಡಿಸಿದ ಪ್ರಸ್ತಾವಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತ್ತು ಎಂದು ಅವರು ವಿವರಿಸಿದರು.

ಈಗ ಬಡ್ತಿ ಪಡೆದಿರುವ 2,600 ಸಿಬ್ಬಂದಿಯು 1983 ಮತ್ತು 2004ರ ನಡುವೆ ನೇಮಕ ಆದವರು. ಉಳಿದ ಸಿಬ್ಬಂದಿಗೆ ಸೂಕ್ತ ಸಮಯದಲ್ಲಿ ಬಡ್ತಿ ದೊರೆಯುತ್ತದೆ ಎಂದು ಅವರು ಹೇಳಿದರು.

ಕಳೆದ ವರ್ಷ ಐಟಿಬಿಪಿ, ಸಿಎಪಿಎಫ್‌ನಲ್ಲಿನ ಅಡುಗೆ, ನೀರು ನಿರ್ವಾಹಕರು, ಕ್ಷೌರಿಕ, ‘ವಾಷರ್‌ಮನ್‌’, ‘ಸ್ವೀಪರ್‌’ ಸಿಬ್ಬಂದಿಗೆ ಬಡ್ತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT