ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024 | ಕಾಂಗ್ರೆಸ್‌ನ ಪಾಪಕೃತ್ಯಗಳಿಗೆ ಜನರಿಂದ ಶಿಕ್ಷೆ: ಪ್ರಧಾನಿ ಮೋದಿ

Published 21 ಏಪ್ರಿಲ್ 2024, 16:11 IST
Last Updated 21 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಜೈಪುರ: ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಪಾಪಕೃತ್ಯಗಳಿಗಾಗಿ ದೇಶದ ಜನರು ಕಾಂಗ್ರೆಸ್‌ ಪಕ್ಷವನ್ನು ‘ಶಿಕ್ಷಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ರಾಜಸ್ಥಾನದ ಭೀನ್‌ಮಾಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ಒಮ್ಮೆ 400 ಸ್ಥಾನಗಳನ್ನು ಗೆದ್ದಿದ್ದ ಪಕ್ಷಕ್ಕೆ ಈಗ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ ಸ್ಪರ್ಧಿಸಲೂ ಆಗುತ್ತಿಲ್ಲ. ಕಾಂಗ್ರೆಸ್‌ನ ಈಗಿನ ಸ್ಥಿತಿಗೆ ಆ ಪಕ್ಷವೇ ಹೊಣೆ’ ಎಂದು ಕುಟುಕಿದರು.

‘ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಹರಡುವ ಮೂಲಕ ಕಾಂಗ್ರೆಸ್ ಪಕ್ಷವು ದೇಶವನ್ನು ಟೊಳ್ಳಾಗುವಂತೆ ಮಾಡಿದೆ. ಇಂದು ದೇಶದ ಜನರು ಕಾಂಗ್ರೆಸ್‌ ಮೇಲೆ ಕೋಪಗೊಂಡಿದ್ದು, ಈ ಪಾಪಗಳಿಗೆ ಅದನ್ನು ಶಿಕ್ಷಿಸುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಮುಖ ನೋಡಬಾರದು ಎಂಬ ಸಿಟ್ಟು ಯುವಜನರಲ್ಲಿದೆ’ ಎಂದರು. 

‘ಬಿಜೆಪಿಯನ್ನು ಎದುರಿಸಲು ಅವರು ಅವಕಾಶವಾದಿ ‘ಇಂಡಿ’ ಒಕ್ಕೂಟ ರಚಿಸಿದ್ದಾರೆ. ಆದರೆ ಅದರ ಸ್ಥಿತಿ, ಹಾರಾಡುವ ಮುನ್ನವೇ ದಾರ ತುಂಡಾದ ಗಾಳಿಪಟದ ಹಾಗಾಗಿದೆ’ ಎಂದು ಲೇವಡಿ ಮಾಡಿದರು.

‘ಈ ಲೋಕಸಭಾ ಚುನಾವಣೆಯಲ್ಲಿ ಶೇ 25 ರಷ್ಟು ಸೀಟುಗಳಲ್ಲಿ ಆ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ. ಚುನಾವಣೆಗೆ ಮುನ್ನವೇ ಇಷ್ಟೊಂದು ಕಚ್ಚಾಟ ನಡೆದರೆ, ಚುನಾವಣೆಯ ನಂತರ ಲೂಟಿಗಾಗಿ ಅವರು ಯಾವ ರೀತಿ ಹೊಡೆದಾಡಿಕೊಳ್ಳಬಹುದು ಎಂಬುದನ್ನು ನಿಮಗೆ ಊಹಿಸಬಹುದು. ಇಷ್ಟು ದೊಡ್ಡ ದೇಶವನ್ನು ಅಂತಹ ಜನರ ಕೈಗೆ ಒಪ್ಪಿಸಬಹುದೇ? ಎಂದು ಪ್ರಶ್ನಿಸಿದರು. 

ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಇಲ್ಲದವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಹೆಸರು ಹೇಳದೆಯೇ ಕಾಂಗ್ರೆಸ್‌ ನಾಯಕಿ, ಸೋನಿಯಾ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.

ಪ್ರಧಾನಿಯ ಮಾತು...

  • 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ‘ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ’ ಶೌಚಾಲಯ, ಅಡುಗೆ ಅನಿಲ, ವಿದ್ಯುತ್, ನೀರು, ಬ್ಯಾಂಕ್ ಖಾತೆಗಳಂತಹ ಸಣ್ಣ ಸೌಲಭ್ಯಗಳನ್ನೂ ನೀಡದೆ ವಂಚಿಸಿದೆ.

  • ಯುಪಿಎ ಆಡಳಿತದಲ್ಲಿ ಪ್ರಧಾನಿಗೆ ಯಾರೂ ಗೌರವ ಕೊಡುತ್ತಿರಲಿಲ್ಲ. ‘ರಿಮೋಟ್‌ ಕಂಟ್ರೋಲ್‌’ನಲ್ಲಿ ಸರ್ಕಾರ ನಡೆಯುತ್ತಿತ್ತು.

  •  2014ರ ಮೊದಲು ಇದ್ದ ಪರಿಸ್ಥಿತಿಗೆ ಮರಳಲು ದೇಶವು ಬಯಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT