ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಪ್ಟೋಕರೆನ್ಸಿ ಹಗರಣ: ₹1 ಕೋಟಿ ನಗದು ವಶಪಡಿಸಿಕೊಂಡ ಇ.ಡಿ

Published 4 ಆಗಸ್ಟ್ 2024, 10:15 IST
Last Updated 4 ಆಗಸ್ಟ್ 2024, 10:15 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಪ್ಟೋಕರೆನ್ಸಿ ಹಗರಣ ಸಂಬಂಧ ಲಡಾಖ್‌ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ₹1 ಕೋಟಿ ನಗದು ಹಾಗೂ ದೋಷಪೂರಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಕ್ರಿಪ್ಟೋಕರೆನ್ಸಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣ ತನಿಖೆಯ ಭಾಗವಾಗಿ ಆಗಸ್ಟ್‌ 2ರಂದು ಲಡಾಖ್‌ನ ಲೇಹ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣದ ಸೋನಿಪತ್‌ನಲ್ಲಿ ಇ.ಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮೊದಲ ಬಾರಿ ದಾಳಿ ನಡೆಸಿದ್ದರು.

ಎಮೋಲಿಯಂಟ್ ಕಾಯಿನ್‌ ಎಂಬ ನಕಲಿ ಕ್ರಿಪ್ಟೋಕರೆನ್ಸಿ ಹೆಸರಿನಲ್ಲಿ ಹೂಡಿಕೆ ಮಾಡುವ ಮೂಲಕ 10 ತಿಂಗಳಲ್ಲಿ ಹೂಡಿಕೆ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ಅಮಾಯಕ ಜನರಿಗೆ ಮೋಸ ಮಾಡಿರುವುದರ ಕುರಿತ ತನಿಖೆ ಇದಾಗಿದೆ ಎಂದು ಇ.ಡಿ ಹೇಳಿದೆ.

2017ರ ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ನಲ್ಲಿ ಸ್ಥಾಪಿಸಲ್ಪಟ್ಟ ಎಮೋಲಿಯಂಟ್‌ ಕಾಯಿನ್‌ ಲಿಮಿಟೆಡ್‌ ಎಂಬ ಕಂಪನಿ ಹೆಸರಿನಲ್ಲಿ ಸೋನಿಪತ್‌ನ ನರೇಶ್‌ ಗುಲಿಯಾ ಎಂಬ ವ್ಯಕ್ತಿ ನಕಲಿ ಕ್ರಿಪ್ಟೋಕರೆನ್ಸಿ ವ್ಯವಹಾರ ನಡೆಸುತ್ತಿದ್ದರು. ಇದರೊಂದಿಗೆ ಲೇಹ್‌ನಲ್ಲಿ ಅಜಯ್‌ ಕುಮಾರ್‌ ಚೌಧರಿ ಮತ್ತು ಅಟ್ಟಿಯುಲ್ ರೆಹಮಾನ್‌ ಮಿರ್‌, ಜಮ್ಮುವಿನಲ್ಲಿ ಚರಣ್‌ಜಿತ್‌ ಸಿಂಗ್‌ ಎಂಬ ವ್ಯಕ್ತಿಗಳು ಈ ವ್ಯವಹಾರದಲ್ಲಿ ತೊಡಗಿದ್ದರು. ಇದಕ್ಕೆ ಪ್ರತಿಯಾಗಿ ನಿಗದಿತ ಶೇಕಡವಾರು ಕಮಿಷನ್‌ ಪಡೆಯುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ನಕಲಿ ವ್ಯಾಪಾರದಿಂದ ಬಂದ ಹಣವನ್ನು ವೈಯಕ್ತಿಕ ಬಳಕೆ, ಆಸ್ತಿ ಖರೀದಿಗೆ ಆರೋಪಿಗಳು ಬಳಸಿದ್ದಾರೆ ಎಂದು ಇ.ಡಿ ತಿಳಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ₹1 ಕೋಟಿ ನಗದು ಮತ್ತು ದೋಷಪೂರಿತ ದಾಖಲೆಗಳನ್ನು ಯಾವ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂಬುವುದನ್ನು ಇ.ಡಿ ಖಚಿತಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT