ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ ಪಶ್ಚಿಮ ಬಂಗಾಳ, ಒಡಿಶಾಗೆ ಅಪ್ಪಳಿಸಲಿದೆ ಅಂಫಾನ್‌ ಚಂಡಮಾರುತ; ಭಾರೀ ಮಳೆ

Last Updated 19 ಮೇ 2020, 5:59 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಕರಾವಳಿಯ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ಅಂಫಾನ್‌ ಚಂಡಮಾರುತದ ಆತಂಕ ಹೆಚ್ಚಿದೆ. ಸಮುದ್ರ ಭಾಗದಿಂದ ಭೂಪ್ರದೇಶದ ಮೇಲೆ ಚಂಡಮಾರುತ ಬುಧವಾರ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅಂಫಾನ್‌ ತೀವ್ರ ಸ್ವರೂಪದ ಚಂಡಮಾರುತವಾಗಿ ಬದಲಾಗಿದ್ದು, ಬಂಗಾಳ ಕೊಲ್ಲಿ ಭಾಗದಲ್ಲಿ ಕಳೆದ ಎರಡು ದಶಕಗಳಲ್ಲೇ ಮೊದಲ ಭಾರಿಗೆ ಈ ತೀವ್ರತೆಎರಗುತ್ತಿದೆ. ಬಿರುಸಾದ ಗಾಳಿಯೊಂದಿಗೆ ಗಂಟೆಗೆ ಸುಮಾರು 200 ಕಿ.ಮೀ ವೇಗದೊಂದಿಗೆ ತಿರುಗುತ್ತಿದೆ. ಒಡಿಶಾ ಸರ್ಕಾರ 11 ಲಕ್ಷದಿಂದ 12 ಲಕ್ಷ ಜನರನ್ನು ಸ್ಥಳಾಂತರಿಸಲು ಸಜ್ಜಾಗಿರುವುದಾಗಿ ತಿಳಿಸಿದೆ.

ಅಂಫಾನ್‌ ಚಂಡಮಾರುತ ಕರಾವಳಿಯ ಅಂಚಿನಲ್ಲಿರುವ ಪಶ್ಚಿಮ ಬಂಗಳಾದ ದಿಂಘಾದಿಂದ ಸುಮಾರು 750 ಕಿ.ಮೀ. ದೂರ ಹಾಗೂ ಒಡಿಶಾದ ಪಾರಾದಿಪ್‌ನಿಂದ ಸುಮಾರು 600 ಕಿ.ಮೀ. ದೂರದಲ್ಲಿರುವುದಾಗಿ ಹವಾಮಾನ ಇಲಾಖೆ ಸೋಮವಾರ ರಾತ್ರಿ ಮಾಹಿತಿ ಪ್ರಕಟಿಸಿದೆ. ಬುಧವಾರ ಸಂಜೆ ಬಾಂಗ್ಲಾದೇಶದ ಹಾತಿಯಾ ದ್ವೀಪ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ದಿಂಘಾ ನಡುವೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದಾಗಿ ಹೇಳಿದೆ.

ಮಂಗಳವಾರ ಬೆಳಿಗ್ಗೆ ನೀಡಿರುವ ಹೊಸ ಎಚ್ಚರಿಕೆ ಸಂದೇಶದಲ್ಲಿ ಪಶ್ಚಿಮ ಬಂಗಾಳದ ಕಡೆಗೆ ನುಗ್ಗುತ್ತಿರುವುದಾಗಿ ತಿಳಿಸಿದ್ದು, ತೀವ್ರ ಸ್ವರೂಪದ ಚಂಡಮಾರುತ ಉಂಟಾಗಲಿದೆ ಎಂದಿದೆ. ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚಂಡಮಾರುತದ ಪರಿಣಾಮ ಎದುರಿಸಲು ಸಿದ್ಧತೆಯ ಕುರಿತು ಮಾತುಕತೆ ನಡೆಸಿದ್ದಾರೆ.

ಎರಡೂ ರಾಜ್ಯದ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 37 ತಂಡಗಳನ್ನು ನಿಯೋಜಿಸಿರುವುದಾಗಿ ಎನ್‌ಡಿಆರ್‌ಎಫ್ ಮುಖ್ಯಸ್ಥ ಎಸ್‌.ಎನ್‌.ಪ್ರಧಾನ್‌ ಹೇಳಿದ್ದಾರೆ.

ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಸಿದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೃಹ ಸಚಿವ ಅಮಿತ್‌ ಶಾ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಾಮರ್ಶಿಸಿದ್ದಾರೆ. ‘ಅಂಫಾನ್ ಎದುರಿಸುವ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಸಿದ್ಧತೆಯನ್ನು ಪರಿಶೀಲಿಸಿದೆ. ತುರ್ತು ಪ್ರತಿಕ್ರಿಯೆ ಮತ್ತು ಸ್ಥಳಾಂತರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮೇ 19 ಮತ್ತು 20ರಂದು ಒಡಿಶಾದ ಹಲವು ಭಾಗಗಳಲ್ಲಿ ಭಾರೀ ಮಳೆ ಹಾಗೂ ಬಿರುಸಾದ ಗಾಳಿ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ರೈಲ್ವೆ ಮತ್ತು ರಸ್ತೆ ಸಂಪರ್ಕಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಕೋವಿಡ್‌–19 ಲಾಕ್‌ಡೌನ್‌ನಿಂದ ರೈಲು ಸಂಚಾರ ಮತ್ತು ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಮನುಷ್ಯರ ಮೇಲೆ ಹಾನಿಯ ಪ್ರಮಾಣ ಕಡಿಮೆ ಇರಲಿದೆ ಎನ್ನಲಾಗಿದೆ.

ಹವಾಮಾನ ಇಲಾಖೆ ಉಭಯ ರಾಜ್ಯಗಳ ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಬಂಗಾಳ ಕೊಲ್ಲಿ ಮೂಲಕ ಹಾದು ಬರುತ್ತಿರುವ ಎರಡನೇ ತೀವ್ರ ಸ್ವರೂಪದ ಚಂಡಮಾರುತ ಇದಾಗಿದೆ. 1999ರಲ್ಲಿ ಬೀಸಿದ ಚಂಡಮಾರುತ ಒಡಿಶಾದಲ್ಲಿ ಸಾಕಷ್ಟು ಹಾನಿ ಉಂಟು ಮಾಡುವ ಜೊತೆಗೆ ಸುಮಾರು 10,000 ಜನರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT