ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ | ಸಂಬಳ ಕೇಳಿದ ದಲಿತ ಯುವಕನ ಬಾಯಿಗೆ ಚಪ್ಪಲಿ: ಮಹಿಳಾ ಉದ್ಯಮಿಯ ಕೃತ್ಯ

Published 24 ನವೆಂಬರ್ 2023, 11:38 IST
Last Updated 24 ನವೆಂಬರ್ 2023, 11:38 IST
ಅಕ್ಷರ ಗಾತ್ರ

ಮಾರ್ಬಿ (ಗುಜರಾತ್‌) : 21 ವರ್ಷ ವಯಸ್ಸಿನ ದಲಿತ ಯುವಕ ನಿಲೇಶ್ ದಲ್ಸಾನಿಯಾ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಮಹಿಳಾ ಉದ್ಯಮಿ ಹಾಗೂ ಆರು ಮಂದಿ ಇತರರ ಮೇಲೆ  ಮಾರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಿಲೇಶ್ ಅವರು ಮಹಿಳಾ ಉದ್ಯಮಿಯ ಕಂಪನಿಯಲ್ಲಿ 16 ದಿನ ಕೆಲಸ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಅವರು ಸಂಬಳ ಕೇಳಿದ್ದರು. ಆಗ ಮಹಿಳಾ ಉದ್ಯಮಿಯು ತನ್ನ ಪಾದರಕ್ಷೆಯನ್ನು ಬಲವಂತದಿಂದ ನಿಲೇಶ್‌ ಅವರು ಬಾಯಿಯಲ್ಲಿ ಕಚ್ಚಿ ಹಿಡಿಯುವಂತೆ ಮಾಡಿದರು, ಆ ಮೂಲಕ ನಿಲೇಶ್ ಕ್ಷಮೆ ಯಾಚಿಸುವಂತೆ ಮಾಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಘಟನೆ ಬುಧವಾರ ನಡೆದಿದೆ. ಹಲ್ಲೆಗೆ ಒಳಗಾದ ನಿಲೇಶ್ ಅವರು ದೂರು ನೀಡಿದ್ದಾರೆ. ಇದನ್ನು ಆಧರಿಸಿ ಮಾರ್ಬಿ ನಗರದ ಪೊಲೀಸರು ಗುರುವಾರ ಎಫ್‌ಐಆರ್‌ ದಾಖಲಿಸಿದ್ದಾರೆ. ಮಹಿಳಾ ಉದ್ಯಮಿ ವಿಭೂತಿ ಪಟೇಲ್, ಅವರ ಸಹೋದರ ಓಂ ಪಟೇಲ್ ಮತ್ತು ನಿರ್ವಾಹಕ ಪರೀಕ್ಷಿತ್ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಎಸ್‌ಸಿ/ಎಸ್‌ಟಿ ಘಟಕದ ಡಿವೈಎಸ್‌ಪಿ ಪ್ರತಿಫಲಸಿಂಹ ಜಾಲಾ ಅವರು ತಿಳಿಸಿದ್ದಾರೆ.

ವಿಭೂತಿ ಪಟೇಲ್ ಅವರು ರಾನಿಬಾ ಇಂಡಸ್ಟ್ರೀಸ್ ಪ್ರೈ.ಲಿ. ಎಂಬ ಕಂಪನಿ ನಡೆಸುತ್ತಿದ್ದಾರೆ. ಅಕ್ಟೋಬರ್ ಆರಂಭದಲ್ಲಿ ವಿಭೂತಿ ಪಟೇಲ್ ಅವರು ನಿಲೇಶ್ ಅವರನ್ನು ಮಾಸಿಕ ₹12 ಸಾವಿರ ಸಂಬಳಕ್ಕೆ ನೇಮಕ ಮಾಡಿಕೊಂಡಿದ್ದರು. ಆದರೆ ಅಕ್ಟೋಬರ್ 18ರಂದು ಅವರನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆಯಲಾಯಿತು. ಕೆಲಸ ಮಾಡಿದ 16 ದಿನಗಳ ಸಂಬಳ ಕೇಳಿದಾಗ, ವಿಭೂತಿ ಪಟೇಲ್ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ನಂತರ ಅವರು ನಿಲೇಶ್ ಅವರ ದೂರವಾಣಿ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ನಿಲೇಶ್ ಅವರು ತಮ್ಮ ಸಹೋದರ ಮೆಹುಲ್ ಮತ್ತು ನೆರೆಯ ಭವೇಶ್ ಎನ್ನುವವರ ಜೊತೆ ಕಂಪನಿಯ ಕಚೇರಿಗೆ ತೆರಳಿದಾಗ, ವಿಭೂತಿ ಅವರ ಸಹೋದರ ಓಂ ಪಟೇಲ್ ಅವರು ತಮ್ಮ ಸಹಚರರೊಂದಿಗೆ ಅಲ್ಲಿಗೆ ಬಂದರು. ನಿಲೇಶ್ ಅವರು ಇನ್ನಿಬ್ಬರ ಮೇಲೆ ಹಲ್ಲೆ ನಡೆಸಿದರು’ ಎಂದು ಜಾಲಾ ವಿವರಿಸಿದರು.

ವಿಭೂತಿ ಅವರು ಕೂಡ ನಿಲೇಶ್ ಅವರಿಗೆ ಹೊಡೆದರು. ಅವರನ್ನು ವಾಣಿಜ್ಯ ಸಂಕೀರ್ಣದ ಟೆರೇಸ್‌ಗೆ ಕರೆದೊಯ್ದರು. ಅಲ್ಲಿ ಪರೀಕ್ಷಿತ್ ಪಟೇಲ್, ಓಂ ಪಟೇಲ್ ಮತ್ತು ಇತರ ಆರರಿಂದ ಏಳು ಜನ ಹಲ್ಲೆ ನಡೆಸಿದರು. ವಿಭೂತಿ ಅವರು ತಮ್ಮ ಪಾದರಕ್ಷೆಯನ್ನು ಬಾಯಿಯಿಂದ ಕಚ್ಚಿ ಹಿಡಿಯುವಂತೆ ಬಲವಂತ ಮಾಡಿದರು, ಸಂಬಳ ಕೇಳಿದ್ದಕ್ಕೆ ಕ್ಷಮೆ ಯಾಚಿಸುವಂತೆ ಮಾಡಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ಹಲ್ಲೆ ನಡೆಸಿದವರು ವಿಡಿಯೊ ಚಿತ್ರೀಕರಿಸಿಕೊಂಡಿದ್ದು, ತಾವು ವಿಭೂತಿ ಅವರ ಕಚೇರಿಗೆ ಬಂದಿದ್ದು ಹಣ ವಸೂಲಿಗೆ ಎಂದು ಹೇಳುವಂತೆ ಬಲವಂತ ಮಾಡಿದ್ದಾರೆ ಎಂದು ದೂರಲಾಗಿದೆ. ವಿಡಿಯೊ ಒಂದರಲ್ಲಿ ಆರೋಪಿಗಳು, ಸಂತ್ರಸ್ತ ವ್ಯಕ್ತಿಯು ವೇತನ ಕೇಳಿದ್ದಕ್ಕೆ ಕ್ಷಮೆ ಯಾಚಿಸುವಂತೆ ಒತ್ತಾಯಿಸುವ ದೃಶ್ಯಗಳು ಇವೆ. 

ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT