ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಕೈಗೆ ಸಿಕ್ಕಿ ದಲಿತರು ಬಲಿಪಶು: ಮೋದಿ ವಾಗ್ದಾಳಿ

Published 3 ಜುಲೈ 2024, 16:00 IST
Last Updated 3 ಜುಲೈ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರದ ವಿಷಯದಲ್ಲಿ ವಿಪಕ್ಷಗಳು ದ್ವಿಮುಖ ನೀತಿ ತಳೆದಿವೆ ಎಂದು ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ, ‘ಒಂದು ಕುಟುಂಬವನ್ನು ರಕ್ಷಿಸುವ ಸಲುವಾಗಿ ಕಾಂಗ್ರೆಸ್‌ ಪಕ್ಷವು ದಲಿತರು ಹಾಗೂ ಹಿಂದುಳಿದ ವರ್ಗಗಳ ನಾಯಕರನ್ನು ಬಲಿಪಶು ಮಾಡುತ್ತಿದೆ’ ಎಂದು ಆರೋಪಿಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ರಾಜ್ಯಸಭೆಯಲ್ಲಿ ಬುಧವಾರ ಉತ್ತರ ನೀಡಿದ ಅವರು, ‘ಇಂತಹ ಪರಿಸ್ಥಿತಿ ಎದುರಾದಾಗ ದಲಿತರು ಹಾಗೂ ಹಿಂದುಳಿದ ನಾಯಕರು ಎಲ್ಲ ಹೊರೆಯನ್ನು ಹೊರಬೇಕು ಹಾಗೂ ಆ ಕುಟುಂಬ (ಗಾಂಧಿ ಕುಟುಂಬ) ಸುರಕ್ಷಿತವಾಗಿ ಉಳಿಯುತ್ತಿತ್ತು’ ಎಂದು ವ್ಯಂಗ್ಯವಾಡಿದರು.

‘ಲೋಕಸಭಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಅದೇ ರೀತಿಯ ಸನ್ನಿವೇಶ ಮರುಕಳಿಸಿತು. ತಮ್ಮ ಸೋಲು ಖಚಿತ ಎಂದು ತಿಳಿದಿದ್ದರೂ ಅವರು ಮುಂದುವರಿಯಲಿಲ್ಲವೇ. ಅವರು ಒಬ್ಬ ದಲಿತ ಸಂಸದನನ್ನು ಕಣಕ್ಕೆ ಇಳಿಸಿದರು’ ಎಂದು ಅವರು ಕುಟುಕಿದರು. ಪ್ರಧಾನಿ ಭಾಷಣದ ಸಂದರ್ಭದಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಸಭಾಪತಿ ಜಗದೀಪ್‌ ಧನಕರ್ ಅವಕಾಶ ನೀಡಲಿಲ್ಲ. ಈ ನಡೆಯನ್ನು ಖಂಡಿಸಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಪ್ರತಿಭಟನೆ ನಡೆಸಿ ಸಭಾತ್ಯಾಗ ನಡೆಸಿತು.

‘ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಸುಶೀಲ್‌ ಕುಮಾರ್ ಶಿಂಧೆ ಅವರನ್ನು ಕಾಂಗ್ರೆಸ್‌ನವರು ಕಣಕ್ಕೆ ಇಳಿಸಿದರು. ದಲಿತ ನಾಯಕರು ಸೋತರೆ ಕಾಂಗ್ರೆಸ್‌ ಕಳೆದುಕೊಳ್ಳುವುದು ಏನಿಲ್ಲ. 2017ರಲ್ಲಿ ಸೋಲು ಖಚಿತವೆಂದು ತಿಳಿದಿದ್ದರೂ ಮೀರಾ ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಕಾಂಗ್ರೆಸ್‌ ಪಕ್ಷವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಮನಸ್ಥಿತಿಯನ್ನು ಹೊಂದಿದೆ. ಅದಕ್ಕೆ ಅವರು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಪದೇ ಪದೇ ಅವಮಾನ ಮಾಡುತ್ತಿದ್ದರು’ ಎಂದು ಅವರು ಹೇಳಿದರು.

ಈ ಮನಸ್ಥಿತಿಯೊಂದಿಗೆ ಅವರು ಮೊದಲ ಆದಿವಾಸಿ ರಾಷ್ಟ್ರಪತಿಯನ್ನು ಕೂಡಾ ಅವಮಾನಿಸುತ್ತಿದ್ದಾರೆ ಹಾಗೂ ಬೇರೆ ಯಾರೂ ಬಳಸದ ಪದಗಳನ್ನು ಬಳಸುತ್ತಿದ್ದಾರೆ ಎಂದರು.

ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿಯು ಕಾಂಗ್ರೆಸ್‌ ಜತೆಗೆ ಕೈಜೋಡಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಿ, ‘ಛತ್ತೀಸಗಢದಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಹೆಸರು ಅಬಕಾರಿ ಹಗರಣದಲ್ಲಿ ಕೇಳಿಬಂದಿತ್ತು. ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಬೇಕು ಎಂದು ಎಎಪಿ ಒತ್ತಾಯಿಸಿತ್ತು. ಅಂತಹ ಪಕ್ಷದೊಂದಿಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ’ ಎಂದರು.

ಕಾಂಗ್ರೆಸ್‌ ಪಕ್ಷವು ದ್ವಂದ್ವ ನಿಲುವುಗಳನ್ನು ಹೊಂದಿದೆ ಎಂದು ವಾಗ್ದಾಳಿ ನಡೆಸಿದ ಮೋದಿ, ‘ಅಕ್ರಮಗಳಲ್ಲಿ ಭಾಗಿಯಾದ ನಾಯಕರ ಜತೆಗೆ ಕಾಂಗ್ರೆಸ್‌ ನಾಯಕರು ನವದೆಹಲಿಯಲ್ಲಿ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ, ಕೇರಳದ ಮುಖ್ಯಮಂತ್ರಿಯನ್ನು ಜೈಲಿಗೆ ಅಟ್ಟಬೇಕು ಎಂದು ‘ಯುವರಾಜ’ (ರಾಹುಲ್‌ ಗಾಂಧಿ) ಒತ್ತಾಯಿಸುತ್ತಾರೆ. ಆದರೆ, ದೆಹಲಿಯಲ್ಲಿ ಸಿಬಿಐ–ಇಡಿಗೆ ಎಚ್ಚರಿಕೆ ನೀಡುತ್ತಾರೆ’ ಎಂದರು.

ಹ್ಯಾಟ್ರಿಕ್ ಸೋಲಿಗೆ ಸಂಭ್ರಮವೇ: ಮೋದಿ ಪ್ರಶ್ನೆ

ಬಿಜೆಪಿ ಬಹುಮತ ಪಡೆಯದಿದ್ದರೂ ಮೈತ್ರಿ ಪಕ್ಷಗಳ ನೆರವಿನಿಂದ ಸರ್ಕಾರ ರಚಿಸಿದೆ ಎಂಬ ಕಾಂಗ್ರೆಸ್‌ ಟೀಕೆಗೆ ಉತ್ತರಿಸಿದ ಮೋದಿ, ‘ಕೇವಲ 99 ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್‌ ಪಕ್ಷವು ಯಾವ ವಿಷಯಕ್ಕೆ ಸಂಭ್ರಮಿಸುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸಿಗರು ಸಂತಸದಿಂದ ಇದ್ದಾರೆ. ಅವರ ಸಂತಸಕ್ಕೆ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಈ ಸಂಭ್ರಮ ಸತತ ಮೂರನೇ ಬಾರಿ (ಹ್ಯಾಟ್ರಿಕ್) ಸೋತಿದ್ದಕ್ಕೆಯೇ? 99ಕ್ಕೆ ಕುಸಿದಿದ್ದಕ್ಕೆ ಈ ಖುಷಿಯೇ? ದಲಿತ ನಾಯಕ ಖರ್ಗೆ ಅವರು ತುಂಬಾ ಉತ್ಸಾಹದಿಂದ ಇರುವುದನ್ನು ಕಂಡಿದ್ದೇನೆ. ಪಕ್ಷದ ಸೋಲಿಗೆ ಹೊಣೆಗಾರಿಕೆಯನ್ನು ಖರ್ಗೆ ಅವರಿಗೆ ವಹಿಸಲಾಗುತ್ತಿದೆ. ಇತರರಿಂದ ಪತನವಾಗುತ್ತಿದ್ದ ಪಕ್ಷವನ್ನು ಅವರು ಉಳಿಸಿದ್ದಾರೆ. ಅವರು ಗೋಡೆಯಂತೆ ನಿಂತಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT