ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ₹1 ಸಾವಿರ ಸಹಾಯಧನ: ದೆಹಲಿ ಸರ್ಕಾರದ ಘೋಷಣೆ

Published 4 ಮಾರ್ಚ್ 2024, 10:02 IST
Last Updated 4 ಮಾರ್ಚ್ 2024, 10:46 IST
ಅಕ್ಷರ ಗಾತ್ರ

ನವದೆಹಲಿ: ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್’ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಮಾಸಿಕ ₹1 ಸಾವಿರ ನೀಡುವ ಘೋಷಣೆಯನ್ನು ಎಎಪಿ ಆಡಳಿತದ ದೆಹಲಿ ಸರ್ಕಾರವು ತನ್ನ 2024–25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದೆ.

ದೆಹಲಿ ವಿಧಾನಸಭೆಯಲ್ಲಿ ತಮ್ಮ 10ನೇ ಬಜೆಟ್ ಭಾಷಣ ಮಾಡಿದ ರಾಜ್ಯ ಸರ್ಕಾರದ ಹಣಕಾಸು ಸಚಿವೆ ಅತಿಶಿ ಅವರು ಈ ಘೋಷಣೆ ಮಾಡಿದ್ದಾರೆ.

‘ಈ ಯೋಜನೆಗಾಗಿಯೇ ₹2,714 ಕೋಟಿ ಮೀಸಲಿಡಲಾಗಿದೆ. ಇದು ಮಹಿಳೆಯರ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿ ವಿವಿಧ ಯೋಜನೆಗಳಿಗೆ ₹6,216 ಕೋಟಿ ಮೀಸಲಿಡಲಾಗಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಈ ಅನುದಾನ ಬಳಕೆ ಮಾಡಲಾಗುವುದು. ಇದರಿಂದಾಗಿ ರಾಜ್ಯದಲ್ಲಿರುವ 9.03 ಲಕ್ಷ ಫಲಾನುಭವಿಗಳಿಗೆ ಮಾಸಿಕ 2 ಸಾವಿರದಿಂದ ₹2,500ರಷ್ಟು ಆರ್ಥಿಕ ನೆರವು ಪಡೆಯುತ್ತಿದ್ದಾರೆ’ ಎಂದು ಸಧನಕ್ಕೆ ಹೇಳಿದರು.

‘2014ರಲ್ಲಿ ದೆಹಲಿಯ ಒಟ್ಟು ಆದಾಯ ₹4.95 ಲಕ್ಷ ಕೋಟಿಯಷ್ಟಿತ್ತು. ಈಗ ಇದು ₹11.08 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. 2014ರಲ್ಲಿ ತಲಾದಾಯ ₹2.47 ಲಕ್ಷ ಇತ್ತು. ಈಗ ಇದು ₹4.62 ಲಕ್ಷಕ್ಕೆ ಏರಿಕೆಯಾಗಿದೆ. ರಾಷ್ಟ್ರಮಟ್ಟದ ಸರಾಸರಿಗೆ ಹೋಲಿಸಿದಲ್ಲಿ ಇದು 2.5 ಪಟ್ಟು ಹೆಚ್ಚಳ’ ಎಂದು ಹೇಳಿದ ಅತಿಶಿ, ₹76 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡಿಸಿದರು.

‘ಕೇಜ್ರಿವಾಲ್ ಸರ್ಕಾರದ ಪ್ರಮುಖ ಆದ್ಯತೆ ಶಿಕ್ಷಣವೇ ಆಗಿದೆ. ಹೀಗಾಗಿ ಈ ಕ್ಷೇತ್ರಕ್ಕೆ ₹16,396 ಕೋಟಿ ಮೀಸಲಿಡಲಾಗಿದೆ. ಶಿಕ್ಷಣ ಕುರಿತು ಸಂಶೋಧನೆ ಹಾಗೂ ತರಬೇತಿಗಾಗಿ ರಚಿಸಲಾಗಿರುವ ರಾಜ್ಯ ಸಮಿತಿಗೆ ₹100 ಕೋಟಿ ಹಾಗೂ ಹೊಸ ಶಾಲೆ ಮತ್ತು ತರಗತಿಗಳನ್ನು ಕಟ್ಟಲು ₹150 ಕೋಟಿ ಮೀಸಲಿಡಲಾಗಿದೆ. ದೆಹಲಿ ಮಾದರಿ ವರ್ಚ್ಯುಯಲ್ ಶಾಲೆಗೆ ₹12 ಕೋಟಿ ಹಾಗೂ ಶಾಲೆ ನಿರ್ವಹಣಾ ಸಮಿತಿಗಾಗಿ ₹40 ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣಕ್ಕೆ ₹1,212 ಕೋಟಿ ಮೀಸಲಿಡಲಾಗಿದೆ. ₹76 ಸಾವಿರ ಕೋಟಿ ಬಜೆಟ್‌ನಲ್ಲಿ ಕೇಂದ್ರದ ತೆರಿಗೆ ಪಾಲಿನ ನಯಾಪೈಸೆಯನ್ನೂ ಬಳಸಿಕೊಂಡಿಲ್ಲ. ಈವರೆಗೂ ಶ್ರೀಮಂತರ ಮಕ್ಕಳು ಶ್ರೀಮಂತರಾಗಿ ಹಾಗೂ ಬಡವರ ಮಕ್ಕಳು ಬಡವರಾಗಿಯೇ ಇರುವುದು ವಾಡಿಕೆಯಾಗಿತ್ತು. ರಾಮರಾಜ್ಯ ಪರಿಕಲ್ಪನೆಗೆ ತದ್ವಿರುದ್ಧವಾದ ಇದನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಬದಲಿಸಿದೆ’ ಎಂದಿದ್ದಾರೆ.

‘ಕಾರ್ಮಿಕರ ಮಕ್ಕಳೂ ಈಗ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾಗುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾದ ನಂತರ ಅಭಿವೃದ್ಧಿಪಡಿಸಲಾದ ಸರ್ಕಾರಿ ಶಾಲೆಗಳಲ್ಲಿ ಕಲಿತ 2,121 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ಅಗತ್ಯವಾದ ಜೆಇಇ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಒಟ್ಟು ಬಜೆಟ್‌ನ 4ನೇ ಒಂದು ಭಾಗದಷ್ಟನ್ನು ನಮ್ಮ ಸರ್ಕಾರ ಶಿಕ್ಷಣಕ್ಕೆ ಮೀಸಲಿಟ್ಟಿದೆ’ ಎಂದು ಅತಿಶಿ ತಿಳಿಸಿದ್ದಾರೆ.

’ಈ ಬಾರಿ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ₹8,685 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಳಕ್ಕೆ ₹6,215 ಕೋಟಿ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಬಜೆಟ್‌ ಮಂಡಣೆಗೆ ವಿಧಾನಸಭೆಗೆ ಬರುವ ಮೊದಲು ಅತಿಶಿ ಅವರು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ತಾಯಿಯ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT