ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP BUDGET 2024: ಸಾಲು ಸಾಲು ಅಭಿವೃದ್ಧಿ ಯೋಜನೆಗಳು

Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬಿಬಿಎಂಪಿಯಲ್ಲಿ ಗುರುವಾರ ಮಂಡನೆಯಾದ ಬಜೆಟ್‌ನಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ಸಿಂಹಪಾಲು ಪಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪರಿಕಲ್ಪನೆ ಬಜೆಟ್‌ ರೂಪ ಪಡೆದಿದೆ. ‘ಬ್ರ್ಯಾಂಡ್‌ ಬೆಂಗಳೂರು’ ಶೀರ್ಷಿಕೆಯಡಿಯೇ ಬಹುತೇಕ ಯೋಜನೆಗಳನ್ನು ಪ್ರಕಟಿಸಲಾಗಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಎಚ್‌. ಕಲಕೇರಿ ಅವರು 2024–25ನೇ ಸಾಲಿನ ₹2.17 ಉಳಿತಾಯ ಬಜೆಟ್‌ ಮಂಡಿಸಿದರು.

ಸ್ವಚ್ಛ ಬೆಂಗಳೂರು

ತ್ಯಾಜ್ಯ ಸಂಸ್ಕರಿಸಲು 4 ದಿಕ್ಕುಗಳಲ್ಲಿ 50ರಿಂದ 100 ಎಕರೆಗಳಷ್ಟು ಜಮೀನುಗಳನ್ನು ಗುರುತಿಸಲಾಗಿದ್ದು, ಖರೀದಿಗಾಗಿ ₹ 100 ಕೋಟಿ ಮೀಸಲಿರಿಸಲಾಗಿದೆ.

ಮಹಿಳೆಯರಿಗಾಗಿ 100 ‘ಶಿ ಟಾಯ್ಲೆಟ್‌’ಗಳನ್ನು ನಿರ್ಮಿಸಲು 10 ಕೋಟಿ ಒದಗಿಸಲಾಗಿದೆ. 

ಘನತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ಭೂಭರ್ತಿ ಪ್ರದೇಶ ಅಭಿವೃದ್ಧಿ ಘನತ್ಯಾಜ್ಯ ಸಂಸ್ಕರಣ ಘಟಕಗಳ ನಿರ್ವಹಣೆಗಳಿಗಾಗಿ ಬಿಎಸ್‌ಡಬ್ಲ್ಯುಎಂಎಲ್‌ಗೆ ₹1,000 ಕೋಟಿ ಪಾಲಿಕೆ ಮೀಸಲಿಡಲಾಗಿದೆ. 

ಪೌರಕಾರ್ಮಿಕರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿ

ಪ್ರತಿ ವಲಯದಿಂದ ಒಬ್ಬರಂತೆ 8 ಪೌರಕಾರ್ಮಿಕರಿಗೆ ತಲಾ ₹50,000 ನಗದು ಒಳಗೊಂಡ ‘ಶರಣೆ ಸತ್ಯಕ್ಕ’ ಪ್ರಶಸ್ತಿಗಳನ್ನು ಪೌರಕಾರ್ಮಿಕರ ದಿನಾಚರಣೆಯಂದು ನೀಡಲು ನಿರ್ಧರಿಸಲಾಗಿದೆ.

ಹಸಿರು ಬೆಂಗಳೂರು

ಬೆಂಗಳೂರಿನ ಮೊಟ್ಟಮೊದಲ ಹವಾಮಾನ ಕ್ರಿಯೆ ಮತ್ತು ಸ್ಥಿತಿ-ಸ್ಥಾಪಕತ್ವ ಯೋಜನೆ ಪ್ರಾರಂಭಗೊಂಡಿದೆ. ಪಾಲಿಕೆಯು ಇತರ ಮಧ್ಯಸ್ಥಗಾರ ಏಜೆನ್ಸಿಗಳ ಮೂಲಕ ಹವಾಮಾನ ಕ್ರಿಯಾ ಕೋಶ (ಕ್ಲೈಮೆಟ್‌ ಆ್ಯಕ್ಷನ್‌ ಸೆಲ್‌) ಮೂಲಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ₹ 10 ಕೋಟಿ ಅನುದಾನ ಮೀಸಲಿರಿಸಲಾಗಿದೆ.

2 ಲಕ್ಷ ಸಸಿಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಅದಕ್ಕಾಗಿ 6 ಹೈಟೆಕ್‌ ಸಸ್ಯಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದೆ. ಹೆಚ್ಚಿನ ಸಸಿಗಳ ಬೇಡಿಕೆ ಪೂರೈಸಲು 2 ಹೊಸ ಹೈಟೆಕ್‌ ಸಸ್ಯಕ್ಷೇತ್ರಗಳನ್ನು ದಾಸರಹಳ್ಳಿ ಮತ್ತು ಯಲಹಂಕದಲ್ಲಿ ಸ್ಥಾಪಿಸಲು ₹14 ಕೋಟಿ ಮೀಸಲಿರಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಹೊಸ ಬಡಾವಣೆಗಳಲ್ಲಿ ಉದ್ಯಾನಗಳ ಅಭಿವೃದ್ಧಿ, ನಿರ್ವಹಣೆಗಾಗಿ ₹35 ಕೋಟಿ ಒದಗಿಸಲಾಗಿದೆ.

ಟೆಕ್‌ಥಾನ್‌

2024ರ ಜೂನ್‌ 5ರ ಹೊತ್ತಿಗೆ ‘ಟೆಕ್‌ಥಾನ್‌’ ಆಯೋಜಿಸಿ, ಸ್ಮಾರ್ಟ್‌ ಆ್ಯಪ್‌, ನಾವೀನ್ಯಕಾರರು ಮತ್ತು ಪ್ರಶಸ್ತಿ ವಿಜೇತರ ಮೂಲಕ ಹವಾಮಾನ ಸುಸ್ಥಿರತೆಯ ಪರಿಹಾರಗಳನ್ನು ಪ್ರಸ್ತುತಪಡಿಸಲು, ಅನುಷ್ಠಾನ ಮಾಡಲು ಅವಕಾಶ ನೀಡಲಾಗುತ್ತಿದೆ.

ವನ್ಯಜೀವಿ ರಕ್ಷಣೆಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ‘ಆರೈಕೆ ಕೇಂದ್ರ’ ಸ್ಥಾಪಿಸಲು ₹1 ಕೋಟಿ ಮೀಸಲಿರಿಸಲಾಗಿದೆ. ಕೆರೆಗಳ ಅಭಿವೃದ್ಧಿ ಮತ್ತು ಸುಧಾರಣೆ, ಕೆರೆಗಳ ಗಡಿಗೆ ತಂತಿಬೇಲಿ ಅಳವಡಿಕೆ ಇತ್ಯಾದಿ ಕಾರ್ಯಗಳಿಗಾಗಿ ₹ 35 ಕೋಟಿ ಒದಗಿಸಲಾಗಿದೆ.

ಟೆಕ್ ಬೆಂಗಳೂರು

ಬಳಕೆಯಲ್ಲಿರುವ ಸಾಫ್ಟ್‌ವೇರ್ ಮತ್ತು ಐಟಿ ಆ್ಯಪ್‌ಗಳನ್ನು ಪರಸ್ಪರ ಸಮನ್ವಯಗೊಳಿಸಿ, ನಾಗರಿಕ ಸೇವೆಗಳಿಗೆ ಸಮಗ್ರವಾದ ವ್ಯವಸ್ಥೆಯನ್ನು ರೂಪಿಸಲು ಈ ಸಾಲಿನಲ್ಲಿ ₹50 ಕೋಟಿ ಒದಗಿಸಲಾಗಿದೆ.

ಸೇವಾ ವೇದಿಕೆ

ಕೊರಿಯರ್‌ ಸೇವೆ, ಅಮೆಜಾನ್‌, ಫ್ಲಿಪ್‌ಕಾರ್ಟ್‌ಗಳ ಮಾದರಿಯಲ್ಲಿ, ನಾಗರಿಕರು ಪಾಲಿಕೆಯಿಂದ ಸೇವೆಗಾಗಿ ಸಲ್ಲಿಸಲಾಗಿರುವ ಅರ್ಜಿಗಳು ಯಾವ ಹಂತದಲ್ಲಿವೆ ಎಂಬುದರ ಮಾಹಿತಿ ನೀಡಲು ‘ಸೇವಾ ವೇದಿಕೆ’ ಅಭಿವೃದ್ಧಿಪಡಿಸಲಾಗುವುದು.

ಶಿಕ್ಷಣ ಬೆಂಗಳೂರು‌

ಪಾಲಿಕೆಯ ಶಾಲಾ ಮತ್ತು ಕಾಲೇಜುಗಳ ಕಲಿಕಾ ಸಾಮರ್ಥ್ಯ ವೃದ್ದಿಸುವ ಸಲುವಾಗಿ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ಮಾಹಿತಿ ಮತ್ತು ತಂತ್ರಜ್ಞಾನ ಲ್ಯಾಬ್, ಸೈನ್ಸ್ ಲ್ಯಾಬ್, ಇ-ಗ್ರಂಥಾಲಯಗಳನ್ನು ಸ್ಥಾಪಿಸುವುದಕ್ಕಾಗಿ 10 ಕೋಟಿ ಮೀಸಲಿರಿಸಲಾಗಿದೆ. ಹೊಸ ಶಾಲಾ ಕಾಲೇಜು ಕಟ್ಟಡಗಳನ್ನು ಅಭಿವೃದ್ದಿಪಡಿಸಲು ₹35 ಕೋಟಿ ಮೀಸಲಿರಿಸಲಾಗಿದೆ.

ಶಾಲೆ ತೋಟ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಕೃಷಿ ಮತ್ತು ತೋಟಗಾರಿಕೆಯ ಪರಿಕಲ್ಪನೆ ಹಾಗೂ ಪರಿಸರ ಕಾಳಜಿ ಮೈಗೂಡಿಸಲು ‘ಶಾಲೆ ತೋಟ’ ನಿರ್ಮಿಸಲು ₹ 5 ಕೋಟಿ ಮೀಸಲಿರಿಸಲಾಗಿದೆ.

ಆಕರ್ಷಕ ಬೆಂಗಳೂರು

250 ಮೀಟರ್ ಎತ್ತರದ ಸ್ಕೈ-ಡೆಕ್ ನಿರ್ಮಿಸಲು ₹350 ಕೋಟಿ ವೆಚ್ವವೆಂದು ಅಂದಾಜಿಸಲಾಗಿದ್ದು, ಈ ಸಾಲಿನಲ್ಲಿ ₹50 ಕೋಟಿ ಅನುದಾನವನ್ನು ಒದಗಿಸಲಾಗುತ್ತಿದೆ.

ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರಕ್ಕೆ ₹ 50 ಕೋಟಿ ಅನುದಾನ ಮೀಸಲಿರಿಸಲಾಗಿದೆ. ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಬೃಹತ್‌ ಕೆಂಪೇಗೌಡ ಭವನ ನಿರ್ಮಿಸಲಾಗುವುದು. ನಗರದಲ್ಲಿರುವ 5 ಲಕ್ಷ ಸಾಂಪ್ರದಾಯಿಕ ಬೀದಿದೀಪಗಳನ್ನು ಎಲ್‌ಇಡಿ ಬೀದಿದೀಪಗಳಾಗಿ ಬದಲಾಯಿಸಲಾಗುವುದು

ಗುಲಾಬಿ ಕೊಠಡಿ

ಮಹಿಳೆಯರಿಗಾಗಿ ಮಾಲ್‌, ಬಸ್‌ ನಿಲ್ದಾಣಗಳಲ್ಲಿ, ಶೌಚಾಲಯಗಳಲ್ಲಿ ಗುಲಾಬಿ ಕೊಠಡಿಗಳನ್ನು ಸ್ಥಾಪಿಸುವುದು. ಮುಟ್ಟಿನ ಸಮಯದಲ್ಲಿ ನ್ಯಾಪ್‌ಕಿನ್‌ಗಳು, ಮತ್ತು ವಿಶ್ರಾಂತಿ ಕೊಠಡಿಗಳನ್ನು ಒದಗಿಸಲು ನಿರ್ಧರಿಸಲಾಗಿದೆ.

ನಗರದಲ್ಲಿರುವ ಮೇಲ್ಸೇತುವೆ, ಕೆಳಸೇತುವೆ, ರಸ್ತೆ ಕೂಡು ಜಾಗಗಳು, ಉದ್ಯಾನಗಳಲ್ಲಿ ಆಕರ್ಷಕ ಬಣ್ಣದ ವಿದ್ಯುತ್ ದೀಪ ಅಳವಡಿಸಲು ₹ 100 ಕೋಟಿ ಅನುದಾನ ಒದಗಿಸಲಾಗಿದೆ. 

ನಗರದ ಕೂಡು ರಸ್ತೆಗಳ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸಲು ₹25 ಕೋಟಿ ಅನುದಾನ ಮೀಸಲಿರಿಸಲಾಗಿದೆ.

ಸುಗಮ ಸಂಚಾರ ಬೆಂಗಳೂರು
2 ಕಡೆ ಸುರಂಗ ಮಾರ್ಗ ನಗರದ ಸಂಚಾರ ದಟ್ಟಣೆಗೆ ದೀರ್ಘ ಪರಿಹಾರ ಕಂಡುಕೊಳ್ಳಲು ‘ಬೆಂಗಳೂರು ನಗರ ಸಮಗ್ರ ಸಂಚಾರ ಯೋಜನೆ’ ತಯಾರಿಸಲಾಗುತ್ತಿದ್ದು, ಸುರಂಗ ಮಾರ್ಗ ಸೇರಿದಂತೆ ವಿವಿಧ ಮಾರ್ಗೋಪಾಯ ಡಿಪಿಆರ್‌ ಸಿದ್ಧಪಡಿಸಲು ಯೋಜನಾ ಸಮಾಲೋಚಕರಿಗೆ ಕಾರ್ಯಾದೇಶ ನೀಡಲಾಗಿದೆ. ಸಂಚಾರ ದಟ್ಟಣೆ ಇರುವ ಎರಡು ಕಡೆ ಸುರಂಗ ಮಾರ್ಗಗಳ ಪ್ರಾಯೋಗಿಕ ನಿರ್ಮಾಣಕ್ಕಾಗಿ ₹200 ಕೋಟಿ ‘ಸೀಡ್‌ ಮನಿ’ ಒದಗಿಸಲಾಗಿದೆ. ಪರಿಷ್ಕೃತ ಮಹಾನಕ್ಷೆ-2015ರಂತೆ (ಆರ್‌ಎಂಪಿ–2015) ಮುಖ್ಯ ರಸ್ತೆಗಳ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ₹130 ಕೋಟಿ ಮೀಸಲಿರಿಸಿದೆ. ಸಂಚಾರಯುಕ್ತ ರಸ್ತೆಗಳು ರಾಜಕಾಲುವೆಯ ಇಕ್ಕೆಲಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ₹100 ಕೋಟಿ ಒದಗಿಸಲಾಗಿದೆ. ಸುಗಮ ಸಂಚಾರಕ್ಕಾಗಿ ವೈಟ್ ಟಾಪಿಂಗ್ ರಸ್ತೆಗಳಿಗಾಗಿ ₹300 ಕೋಟಿ ಇಟ್ಟಿದೆ. ಸಂಯುಕ್ತ ಮೆಟ್ರೊ-ರಸ್ತೆ ಮೇಲ್ಸೇತುವೆ ಮಾರ್ಗ (ಡಬಲ್ ಡೆಕ್ಕರ್ ರಸ್ತೆ) ಗಳನ್ನು ನಿರ್ಮಿಸಲು ₹100 ಕೋಟಿ ಒದಗಿಸಲಾಗಿದೆ. ಮೈದಾನದ ಅಡಿಯಲ್ಲಿ ಪಾರ್ಕಿಂಗ್‌ ಪಾಲಿಕೆಗೆ ಸೇರಿದ ಆಟದ ಮೈದಾನದ ತಳಭಾಗದಲ್ಲಿ (ಅಂಡರ್‌ಗ್ರೌಂಡ್‌) ವಾಹನಗಳ ನಿಲುಗಡೆ ಸೌಲಭ್ಯ ಒದಗಿಸಲು ₹5 ಕೋಟಿ ಮೀಸಲಿರಿಸಲಾಗಿದೆ.
ವಾರ್ಡ್‌ಗಳಿಗೆ ₹450 ಕೋಟಿ
225 ವಾರ್ಡ್‌ಗಳ ನಿರ್ವಹಣೆಗಾಗಿ ‌ಪ್ರತಿ ವಾರ್ಡ್‌ಗೆ ತಲಾ ₹75 ಲಕ್ಷ ಒದಗಿಸಲಾಗಿದೆ. ಚರಂಡಿ ಹೂಳೆತ್ತುವುದು, ನಿರ್ವಹಣೆಗೆ ತಲಾ ₹30 ಲಕ್ಷ, ರಸ್ತೆ ಗುಂಡಿ ಮುಚ್ಚಲು ತಲಾ ₹15 ಲಕ್ಷ, ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ ₹25 ಲಕ್ಷ, ಮಳೆಗಾಲದ ಕಂಟ್ರೋಲ್‌ ರೂಮ್‌ ನಿರ್ವಹಣೆಗೆ ತಲಾ ₹ 5 ಲಕ್ಷ ನೀಡಲಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರತಿ ವಾರ್ಡ್‌ಗೆ ತಲಾ ₹1.25 ಕೋಟಿ ಒದಗಿಸಲಾಗುತ್ತದೆ. ಇದರ ಒಟ್ಟು ಮೊತ್ತ ₹ 450 ಕೋಟಿ ಆಗಲಿದೆ.

ಆರೋಗ್ಯಕರ ಬೆಂಗಳೂರು

ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಆರೋಗ್ಯ ಸೇವೆಗಳ ಉನ್ನತೀಕರಿಸಲು ₹100 ಕೋಟಿ ಅನುದಾನ ಒದಗಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಾಲಿಕೆ ನಡುವಿನ ಸುಗಮ ಸಮನ್ವಯಕ್ಕಾಗಿ. ‘ಬೆಂಗಳೂರು ಆರೋಗ್ಯ ಆಯುಕ್ತರು’ ಎನ್ನುವ ಹೊಸ ಹುದ್ದೆಯನ್ನು ಸೃಜಿಸಲಾಗುತ್ತಿದೆ. ಇದಕ್ಕಾಗಿ ₹20 ಕೋಟಿ ಮೀಸಲಿರಿಸಲಾಗಿದೆ.

ಸದೃಢ ಆರೋಗ್ಯ

‘ಸಮಗ್ರ ಸದೃಢ ಆರೋಗ್ಯ’ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ₹64 ಕೋಟಿ ವೆಚ್ಚದಲ್ಲಿ 40 ಹೊಸ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, 81 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. 24 ಹೆರಿಗೆ ಆಸ್ಪತ್ರೆಗಳು ಮತ್ತು ರೆಫರಲ್‌ ಘಟಕಗಳಲ್ಲಿ ಕೊಠಡಿಗಳು ₹24 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ. 

50 ಇಂದಿರಾ ಕ್ಯಾಂಟೀನ್

50 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಿರ ಅಥವಾ ಮೊಬೈಲ್ (ಸಂಚಾರಿ) ಮಾದರಿಯಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ. ಇದಕ್ಕಾಗಿ ₹70 ಕೋಟಿ ಮೀಸಲಿಡಲಾಗಿದೆ. ಹೊಸ ರುದ್ರಭೂಮಿ ಹಾಗೂ ಚಿತಾಗಾರಗಳನ್ನು ನಿರ್ಮಾಣ ಮಾಡಲು ₹ 15 ಕೋಟಿಗಳನ್ನು ಒದಗಿಸಲಾಗಿದೆ. ಆಧುನಿಕ ಕಸಾಯಿಖಾನೆ ನಿರ್ಮಾಣ ಮಾಡಲು ಹಾಗೂ ಪ್ರಾಣಿಗಳ ತ್ಯಾಜ್ಯ ವಿಲೇವಾರಿಗಾಗಿ 4 ಘಟಕಗಳನ್ನು ನಿರ್ಮಿಸಲು ₹10 ಕೋಟಿ ಒದಗಿಸಲಾಗಿದೆ.

ಆರೋಗ್ಯ ಸಾರಥಿ

‘ರೋಗ ನಿರೋಧಕ ಶಕ್ತಿ’ ಸುಧಾರಿಸಲು ವಿದ್ಯುತ್‌ ಚಾಲಿತ ವಾಹನಗಳಲ್ಲಿ ಮನೆ ಬಾಗಿಲಿಗೆ ತೆರಳಿ ಚುಚ್ಚುಮದ್ದು ನೀಡುವ ‘ಆರೋಗ್ಯ ಸಾರಥಿ’ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂವಾದಾತ್ಮಕ ಯುಟ್ಯೂಬ್‌

ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಕೌನ್ಸೆಲಿಂಗ್‌ ಮಾಡಲು ಪಾಲಿಕೆಯ ಆಂತರಿಕ ವೈದ್ಯರ ತಂಡ ಮತ್ತು ಕ್ಷೇತ್ರ ತಜ್ಞರ ಸಹಾಯದಿಂದ ‘ಮನೋಬಿಂಬ’ ಎಂಬ ಸಂವಾದಾತ್ಮಕ ಯುಟ್ಯೂಬ್‌ ಆರಂಭಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT