ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ: ಅಗ್ನಿ ಸುರಕ್ಷತಾ ತಪಾಸಣೆ ನಡೆಸಲು ಆಸ್ಪತ್ರೆಗಳಿಗೆ ಸೂಚನೆ

ನವಜಾತ ಶಿಶು ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ ಬಳಿಕ ರಾಜ್ಯ ಸರ್ಕಾರದಿಂದ ನಿರ್ಧಾರ
Published 27 ಮೇ 2024, 14:13 IST
Last Updated 27 ಮೇ 2024, 14:13 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ನ್ಯೂಬಾರ್ನ್‌ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಏಳು ಶಿಶುಗಳು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ, ಜೂನ್‌ 8ರ ಒಳಗೆ ಅಗ್ನಿ ಸುರಕ್ಷತಾ ಪರಿಶೀಲನೆ ನಡೆಸಿ ವರದಿ ನೀಡುವಂತೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ನಿರ್ದೇಶನ ನೀ‌ಡಿದೆ.

ವಿವೇಕ್‌ ವಿಹಾರ್‌ ಪ್ರದೇಶದ ನ್ಯೂಬಾರ್ನ್‌ ಬೇಬಿ ಕೇರ್‌ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿ ಚರ್ಚೆ ನಡೆಸುವ ಸಲುವಾಗಿ ರಾಜ್ಯದ ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್ ಸೋಮವಾರ ಸಭೆ ಕರೆದಿದ್ದರು.

‘ಅಗ್ನಿ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ಏಪ್ರಿಲ್‌ 24ರಂದು ಎಲ್ಲಾ ಆಸ್ಪತ್ರೆಗಳಿಗೆ ಸೂಚಿಸಲಾಗಿತ್ತು. ಮೇ 8ರಂದು ಅಗ್ನಿ ಸುರಕ್ಷತಾ ಪರಿಶೀಲನೆ ನಡೆಸಲು ಸೂಚಿಸಿದ್ದೆವು. ಈಗ, ಅಗ್ನಿ ಸುರಕ್ಷತಾ ಪರಿಶೀಲನೆ ನಡೆಸಿ, ಅನುಪಾಲನಾ ವರದಿಯನ್ನೂ ಸಲ್ಲಿಸಲು ದೆಹಲಿಯ ಎಲ್ಲಾ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಅವರು ವರದಿಗಾರರಿಗೆ ಹೇಳಿದರು.

‘ಘಟನೆ ವೇಳೆ ಇಬ್ಬರು ನರ್ಸ್‌ಗಳು ಮತ್ತು ಸ್ಥಳೀಯರು ತಮ್ಮ ಜೀವದ ಹಂಗು ತೊರೆದು ಶಿಶುಗಳನ್ನು ರಕ್ಷಿಸಿದ್ದಾರೆ. ನಾವು ಅವರ ಹೆಸರುಗಳನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ. ದುರ್ಘಟನೆಯಲ್ಲಿ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತು ಗಾಯಗೊಂಡ ಮಕ್ಕಳ ಪೋಷಕರಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ’ ಎಂದರು.

ಪರವಾನಗಿ ಮುಗಿದಿತ್ತು: ಪರವಾನಗಿ ಮುಕ್ತಾಯವಾಗಿದ್ದರೂ ಈ ಆಸ್ಪತ್ರೆಯು ಕಾರ್ಯಾಚರಣೆಯಲ್ಲಿತ್ತು ಮತ್ತು ಆಸ್ಪತ್ರೆಯಲ್ಲಿ ತಜ್ಞ ವೈದ್ಯರೂ ಇರಲಿಲ್ಲ. ಜೊತೆಗೆ ಅಗ್ನಿಶಾಮಕ ವಿಭಾಗದಿಂದಲೂ ಸುರಕ್ಷತಾ ಪ್ರಮಾಣಪತ್ರ ಪಡೆದಿರಲಿಲ್ಲ ಎಂದು ಪೊಲೀಸರು ಭಾನುವಾರ ಹೇಳಿದ್ದರು. ಘಟನೆಯಲ್ಲಿ ಐವರು ಮಕ್ಕಳು ಗಾಯಗೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT