ನವದೆಹಲಿ: ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ತಮ್ಮ ವಿರುದ್ಧ ದೋಷಾರೋಪಗಳನ್ನು ನಿಗದಿ ಮಾಡಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಮಹಾಜನ್, ಸ್ವಾತಿ ಮಾಲಿವಾಲ್ ವಿರುದ್ಧ ದೋಷಾರೋಪ ನಿಗದಿ ಮಾಡಿದ್ದನ್ನು ರದ್ದುಪಡಿಸಲು ನಿರಾಕರಿಸಿದರು. ಈ ಕುರಿತ ವಿಸ್ತೃತ ಆದೇಶ ಲಭ್ಯವಾಗಬೇಕಿದೆ.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ಸ್ವಾತಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ಎಎಪಿ ಜೊತೆ ಗುರುತಿಸಿಕೊಂಡಿದ್ದವರನ್ನು ಆಯೋಗದ ವಿವಿಧ ಹುದ್ದೆಗಳಿಗೆ ನೇಮಕ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಸ್ವಾತಿ ಹಾಗೂ ಇತರ ಮೂವರ ವಿರುದ್ಧ ದೋಷಾರೋಪ ನಿಗದಿ ಮಾಡುವಂತೆ ವಿಚಾರಣಾ ನ್ಯಾಯಾಲಯ 2022ರ ಡಿಸೆಂಬರ್ 8ರಂದು ಆದೇಶಿಸಿತ್ತು.
ಆಯೋಗದ ಮಾಜಿ ಅಧ್ಯಕ್ಷೆಯೂ ಆದ ಬಿಜೆಪಿ ಶಾಸಕಿ ಬರ್ಖಾ ಶುಕ್ಲಾ ಸಿಂಗ್ ನೀಡಿದ ದೂರಿನ ಅನ್ವಯ ಸ್ವಾತಿ ಮಾಲಿವಾಲ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿತ್ತು.