ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾರನ್ನು ‘ದೀದಿ’ ಎನ್ನಬೇಡಿ ಅವರು ಈಗ ‘ಆಂಟಿ’ ಆಗಿದ್ದಾರೆ: ಸುವೆಂದು ಅಧಿಕಾರಿ

Published 25 ಫೆಬ್ರುವರಿ 2024, 3:17 IST
Last Updated 25 ಫೆಬ್ರುವರಿ 2024, 3:17 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಮಮತಾ ಬ್ಯಾನರ್ಜಿ ಅವರನ್ನು ಇನ್ನು ಮುಂದೆ ‘ದೀದಿ’ ಎಂದು ಕರೆಯುವುದನ್ನು ನಿಲ್ಲಿಸಿ. ಅವರು ಈಗ ‘ಆಂಟಿ’ ಆಗಿದ್ದು, ‘ಕ್ರೂರ ಮಹಿಳೆ’ ಎಂದು ಕರೆಯಬೇಕು ಎಂದು ಟೀಕಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ನಾನು ಅವರನ್ನು (ಮಮತಾ ಬ್ಯಾನರ್ಜಿ) ನಂದಿಗ್ರಾಮದಲ್ಲಿ ಸೋಲಿಸಿದ್ದೇನೆ. ಅವರು ನನ್ನ ವಿರುದ್ಧ 42 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಗುಡುಗಿದ್ದಾರೆ.

ಸಂದೇಶ್‌ಖಾಲಿಯಲ್ಲಿ ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಮತ್ತು ಅವರ ಬೆಂಬಲಿಗರು ಭೂ ಕಬಳಿಕೆ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ನಂತರದಲ್ಲಿ ರಾಜಕೀಯ ಗದ್ದಲ ಭುಗಿಲೆದ್ದಿದೆ.

‘ಪೊಲೀಸರು ಶಹಜಹಾನ್‌ ಶೇಖ್‌ ಅವರನ್ನು ಬಂಧಿಸುವುದಿಲ್ಲ. ಏಕೆಂದರೆ, ಅವರು (ಶೇಖ್) ಅಲ್ಲಿನ ಮತಗಳನ್ನು ನಿಯಂತ್ರಿಸುತ್ತಾರೆ. ಅವರನ್ನು ಬಂಧಿಸಿದರೆ ಟಿಎಂಸಿ ಬಸಿರ್‌ಹತ್ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಮಾರ್ಚ್ 6ರಂದು ಸಿಜೆಐ ಅವರ ಪೀಠದಲ್ಲಿ ಪ್ರಕರಣ ಸಂಬಂಧ ವಿಚಾರಣೆ ಇದೆ. ಪ್ರಕರಣವು ಸಿಬಿಐಗೆ ಹೋಗುತ್ತದೆ ಮತ್ತು ಅದಾದ, 24 ಗಂಟೆಗಳ ಒಳಗೆ ಶಹಜಹಾನ್ ಜೈಲಿನಲ್ಲಿರುತ್ತಾನೆ’ ಎಂದು ಅಧಿಕಾರಿ ಕುಟುಕಿದ್ದಾರೆ.

‘ಪ್ರಕರಣದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ತಲೆಮರೆಸಿಕೊಂಡಿರುವ ಶಹಜಹಾನ್‌ ಶೇಖ್‌ಗೆ ಗರಿಷ್ಠ ಶಿಕ್ಷೆ ವಿಧಿಸಬೇಕು. ಸಿಬಿಐ ಮತ್ತು ಎನ್‌ಐಎ ತನಿಖೆ ನಡೆಯಬೇಕು. ಸರ್ಕಾರ ಸೂಕ್ತ ಕ್ರಮ ಜರುಗಿಸುವುದನ್ನು ನೋಡಲು ಸಂದೇಶ್‌ಖಾಲಿ ಮತ್ತು ಪಶ್ಚಿಮ ಬಂಗಾಳದ ಜನ ಕಾಯುತ್ತಿದ್ದಾರೆ. ಅಲ್ಲಿ 144 ಸೆಕ್ಷನ್ ಜಾರಿ ಮಾಡಿರುವುದು ಬಿಜೆಪಿಯ ಸಂಸದರು, ಶಾಸಕರನ್ನು ತಡೆಯಲು ಮಾತ್ರ. ಇದು ರಾಜಕೀಯ ದುರುದ್ದೇಶದ ನಡೆ’ ಎಂದು ಅಧಿಕಾರಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT