ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ವಿರುದ್ಧ ಬಂಧನ ವಾರಂಟ್‌

Last Updated 24 ಜೂನ್ 2018, 18:50 IST
ಅಕ್ಷರ ಗಾತ್ರ

ನವದೆಹಲಿ: ಕಸ್ಟಮ್ಸ್‌ ಸುಂಕ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ವಿರುದ್ಧ ಗುಜರಾತ್‌ನ ಸೂರತ್‌ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿದೆ

ಈ ವಾರಂಟ್‌ ಅನ್ನು ಪ್ರಕರಣದ ತನಿಖೆ ನಡೆಸುತ್ತಿರುವ ರೆವೆನ್ಯೂ ಗುಪ್ತಚರ ಸಂಸ್ಥೆ ಡಿಆರ್‌ಐ ಭಾನುವಾರ ಮೋದಿ ಇ–ಮೇಲ್‌ ವಿಳಾಸಕ್ಕೆ ರವಾನಿಸಿದೆ.

ಕಸ್ಟಮ್ಸ್‌ ಸುಂಕ ವಂಚನೆ ಪ್ರಕರಣದಲ್ಲಿ ವಿಚಾರಣೆ ಹಾಜರಾಗುವಂತೆ ಸೂರತ್‌ ನ್ಯಾಯಾಲಯ ಈ ಮೊದಲು ಹಲವು ಬಾರಿ ಸಮನ್ಸ್‌ ನೀಡಿತ್ತು. ಆದರೆ,ನೀರವ್‌ ಅಥವಾ ಅವರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಬಂಧನ ವಾರಂಟ್‌ ಹೊರಡಿಸಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ₹13 ಸಾವಿರ ಕೋಟಿ ಸಾಲ ಪಡೆದು ವಂಚಿಸಿದ ನೀರವ್‌ ಮತ್ತು ಸಂಬಂಧಿ ಮೆಹುಲ್‌ ಚೋಕ್ಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಕೂಡ ನೀರವ್‌, ಚೋಕ್ಸಿ ಮತ್ತು ಅವರ ಒಡೆತನದ ಕಂಪನಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿವೆ.
**
ವಂಚನೆಗೆ ಹಲವು ಒಳದಾರಿ!
ಗುಜರಾತ್‌ನ ಸೂರತ್‌ನ ವಿಶೇಷ ಆರ್ಥಿಕ ವಲಯದಲ್ಲಿರುವ ನೀರವ್‌ ಮೋದಿಗೆ ಸೇರಿದ ಕಂಪನಿಗಳು, ವಿದೇಶದಿಂದ ಆಮದು ಮಾಡಿಕೊಂಡ ₹890 ಮೌಲ್ಯದ ವಜ್ರದ ಹರಳುಗಳು ಮತ್ತು ಮುತ್ತುಗಳನ್ನು ಮುಕ್ತ
ಮಾರುಕಟ್ಟೆಯಲ್ಲಿ ಮಾರಾಟ ಮಾಡಿಕೊಂಡ ಆರೋಪ ಎದುರಿಸುತ್ತಿವೆ.

ವಿಶೇಷ ಆರ್ಥಿಕ ವಲಯದಲ್ಲಿರುವ ಕಂಪನಿಗಳಾದ ಕಾರಣ ಕಸ್ಟಮ್ಸ್‌ ಸುಂಕದಲ್ಲಿ ಸರ್ಕಾರ ಒಟ್ಟು ₹52 ಕೋಟಿ ರಿಯಾಯ್ತಿ ನೀಡಿತ್ತು. ಸುಂಕ ರಿಯಾಯ್ತಿ ಪಡೆದ ಈ ವಜ್ರದ ಹರಳು, ಮುತ್ತುಗಳನ್ನು ಮುಕ್ತ ಮಾರುಕಟ್ಟೆ
ಯಲ್ಲಿ ಮಾರಾಟ ಮಾಡುವಂತಿಲ್ಲ.

ಕಸ್ಟಮ್ಸ್‌ ಸುಂಕ ತಪ್ಪಿಸಿಕೊಳ್ಳಲು ನೀರವ್‌ ಮತ್ತೊಂದು ತಂತ್ರ ಹೂಡಿದ್ದರು. ಆಮದು ಮಾಡಿಕೊಂಡ ಕಳಪೆ ಗುಣಮಟ್ಟದ ವಜ್ರದ ಹರಳು ಮತ್ತು ಮುತ್ತುಗಳನ್ನು ಸಂಸ್ಕರಿಸಿ ಮತ್ತೆ ವಿದೇಶಕ್ಕೆ ರಫ್ತು ಮಾಡುತ್ತಿರುವುದನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಡಿಆರ್‌ಐ ಪತ್ತೆ ಹಚ್ಚಿತ್ತು.

ನೀರವ್‌ ಒಡೆತನದ ಫೈರ್‌ಸ್ಟಾರ್‌ ಇಂಟರ್‌ನ್ಯಾಷನಲ್‌ ಪ್ರವೇಟ್‌ ಲಿಮಿಟೆಡ್‌ (ಎಫ್‌ಐಪಿಎಲ್‌), ಫೈರ್‌ಸ್ಟಾರ್‌ ಡೈಮಂಡ್‌ ಇಂಟರ್‌ನ್ಯಾಷನಲ್‌ ಪ್ರವೇಟ್‌ ಲಿಮಿಟೆಡ್‌ (ಎಫ್‌ಡಿಐಪಿಎಲ್‌) ಮತ್ತು ರಾಧಾಶಿರ್‌ ಜ್ಯೂಲ್ರಿ ಕಂಪನಿ ಪ್ರವೇಟ್‌ ಲಿಮಿಟೆಡ್‌ (ಆರ್‌ಜೆಸಿಪಿಎಲ್‌) ವಿರುದ್ಧ ಡಿಆರ್‌ಐ ಮಾರ್ಚ್‌ನಲ್ಲಿ ಪ್ರಕರಣ ದಾಖಲಿಸಿತ್ತು.
**
ಬ್ರಿಟನ್‌ನಲ್ಲಿ ಆಶ್ರಯ ಕೋರಿ ಅರ್ಜಿ!

ಲಂಡನ್‌ : ಭಾರತದ ಅಧಿಕಾರಿಗಳು ನೀರವ್‌ ಮೋದಿಗಾಗಿ ಹುಡುಕುತ್ತಿದ್ದಾಗ ಬ್ರಿಟನ್‌ನಲ್ಲಿ ಆತ ರಾಜಾರೋಷವಾಗಿ ತಿರುಗಾಡಿಕೊಂಡಿದ್ದ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಈ ನಡುವೆ ಮೋದಿ ಆಶ್ರಯ ಕೋರಿ ಬ್ರಿಟನ್‌ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾನೆ ಎಂಬ ಸುದ್ದಿಗಳು ದಟ್ಟವಾಗಿದ್ದು, ಇನ್ನೂ ದೃಢಪಟ್ಟಿಲ್ಲ.

ಲಂಡನ್‌ನ ಪ್ರತಿಷ್ಠಿತ ಮೇಫೇರ್‌ ಪ್ರದೇಶದಲ್ಲಿರುವ ತನ್ನ ವಜ್ರಾಭರಣ ಮಳಿಗೆಯ ಮೇಲಿನ ಪ್ಲ್ಯಾಟ್‌ನಲ್ಲಿಯೇ ಆತ ವಾಸವಾಗಿದ್ದ.

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಭಾರತ ಫೆಬ್ರುವರಿಯಲ್ಲಿ ನೀರವ್‌ ಪಾಸ್‌ಪೋರ್ಟ್ ರದ್ದು ಮಾಡಿದ ನಂತರವೂ ನಾಲ್ಕು ಬಾರಿ ಆತ ಬ್ರಿಟನ್‌ನಿಂದ ಸಿಂಗಪುರ ಸೇರಿದಂತೆ ಬೇರೆ ರಾಷ್ಟ್ರಗಳಿಗೆ ಹೋಗಿ ಬಂದಿದ್ದಾನೆ ಎಂದು ಮಾಧ್ಯಮಗಳು ಹೇಳಿವೆ.

ಲಂಡನ್‌ನ ’ನೀರವ್‌ ಮೋದಿ’ ವಜ್ರಾಭರಣ ಮಳಿಗೆಗೆ ಕಳೆದ ವಾರ ಬೀಗ ಜಡಿಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT