ನವದೆಹಲಿ: ಈಚೆಗೆ ನಡೆದ ಲೋಕಸಭಾ ಚುನಾವಣೆಯ ವೆಚ್ಚಕ್ಕಾಗಿ ಸಿಪಿಎಂ, ಅತಿಹೆಚ್ಚು ಹಣವನ್ನು ಮುಕೇಶ್ ಅವರಿಗೆ ನೀಡಿದೆ. ಕೊಲ್ಲಂ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರಿಗೆ ₹ 79 ಲಕ್ಷ ನೀಡಲಾಗಿದೆ ಎಂದು ಪಕ್ಷವು ಸಲ್ಲಿಸಿರುವ ‘ಚುನಾವಣಾ ವೆಚ್ಚದ ವರದಿ’ ತಿಳಿಸಿದೆ.
ಲೋಕಸಭಾ ಚುನಾವಣಾ ಖರ್ಚಿಗೆ ಪಕ್ಷದಿಂದ ಹೆಚ್ಚಿನ ಹಣ ಲಭಿಸಿದರೂ, ಅವರಿಗೆ ಆರ್‌ಎಸ್‌ಪಿಯ ಎನ್.ಕೆ.ಪ್ರೇಮಚಂದ್ರನ್ ಅವರನ್ನು ಮಣಿಸಲು ಅಗಿರಲಿಲ್ಲ. ಕೇರಳದಿಂದ (ಆಲತ್ತೂರ್ ಕ್ಷೇತ್ರ) ಗೆದ್ದಿರುವ ಸಿಪಿಎಂನ ಏಕೈಕ ಸಂಸದ ಕೆ.ರಾಧಾಕೃಷ್ಣನ್ ಅವರಿಗೆ ಪಕ್ಷವು ₹ 37.40 ಲಕ್ಷ ನೀಡಿದೆ.
ಎಡಪಕ್ಷದಿಂದ ಗೆದ್ದಿರುವ ಇತರ ಮೂವರು ಸಂಸದರಿಗೂ ಚುನಾವಣಾ ವೆಚ್ಚಕ್ಕೆ, ಮುಕೇಶ್ ಅವರಿಗಿಂತ ಕಡಿಮೆ ಹಣ ನೀಡಲಾಗಿದೆ. ಆರ್.ಸಚ್ಚಿದಾನಂದನ್ (ತಮಿಳುನಾಡಿನ ದಿಂಡಿಗಲ್ ಕ್ಷೇತ್ರ) ಅವರಿಗೆ ₹ 70.63 ಲಕ್ಷ, ಎಸ್.ವೆಂಕಟೇಶನ್ (ತಮಿಳುನಾಡಿನ ಮದುರೈ) ಅವರಿಗೆ ₹ 36.99 ಲಕ್ಷ ಹಾಗೂ ಅಮ್ರಾ ರಾಮ್ (ರಾಜಸ್ಥಾನದ ಸೀಕರ್) ಅವರಿಗೆ ₹ 10 ಲಕ್ಷ ನೀಡಿದೆ.