ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು

Published 14 ಮೇ 2024, 11:18 IST
Last Updated 14 ಮೇ 2024, 11:18 IST
ಅಕ್ಷರ ಗಾತ್ರ

ನವದೆಹಲಿ: ಎಲ್ಗಾರ್ ಪರಿಷತ್– ಮಾವೋವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನವ್ಲಾಖಾ ಅವರಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ಆದೇಶದ ಮೇಲಿನ ತಡೆ ವಿಸ್ತರಣೆಗೆ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ ನಿರಾಕರಿಸಿದೆ.

ಗೃಹ ಬಂಧನದ ಭದ್ರತಾ ವೆಚ್ಚವಾಗಿ ₹20 ಲಕ್ಷ ಪಾವತಿಸಬೇಕೆಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.

‘ಬಾಂಬೆ ಹೈಕೋರ್ಟ್ ನೀಡಿರುವ ಜಾಮೀನು ಮೇಲಿನ ತಡೆ ವಿಸ್ತರಿಸದಿರಲು ನಾವು ನಿರ್ಧರಿಸಿದ್ದೇವೆ. ತನಿಖೆಯು ಬಹಳ ವರ್ಷ ತೆಗೆದುಕೊಳ್ಳುತ್ತದೆ. ಈಗಾಗಲೇ ಹಲವು ವರ್ಷ ಕಳೆದಿದೆ. ಈ ಬಗ್ಗೆ ಹೆಚ್ಚು ಎಳೆದಾಡದೆ ತಡೆ ವಿಸ್ತರಿಸದಿರಲು ನಿರ್ಧರಿಸಲಾಗಿದೆ. ಗೃಹ ಬಂಧನದ ಭದ್ರತಾ ಖರ್ಚಾಗಿ ಶೀಘ್ರ ₹20 ಲಕ್ಷ ನೀಡುವಂತೆ ಆದೇಶಿಸುತ್ತೇವೆ’ ಎಂದು ಪೀಠ ಹೇಳಿದೆ.

ನವ್ಲಾಖಾ ಅವರು 4 ವರ್ಷಗಳಿಂದ ಜೈಲಿನಲ್ಲಿದ್ದು, ಅವರ ಮೇಲಿನ ದೋಷಾರೋಪಟ್ಟಿ ಇನ್ನೂ ಸಲ್ಲಿಸಲಾಗಿಲ್ಲ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ.

ಕಳೆದ ವರ್ಷ ಡಿಸೆಂಬರ್ 19ರಂದು ಜಾಮೀನು ಮಂಜೂರು ಮಾಡಿದ್ದ ಬಾಂಬೆ ಹೈಕೋರ್ಟ್, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುವುದರಿಂದ ಸಮಯ ನೀಡುವಂತೆ ಎನ್‌ಐಎ ಕೋರಿದ್ದರಿಂದ 3 ವಾರಗಳ ಕಾಲ ಜಾಮೀನಿಗೆ ತಡೆ ನೀಡಿತ್ತು.

2018ರ ಆಗಸ್ಟ್ ತಿಂಗಳಲ್ಲಿ ಬಂಧನಕ್ಕೀಡಾಗಿದ್ದ ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿರಿಸಲು ಕಳೆದ ವರ್ಷದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಸದ್ಯ, ಅವರು ನವಿ ಮುಂಬೈನ ನಿವಾಸದಲ್ಲಿದ್ದಾರೆ.

2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ನವ್ಲಾಖಾ ಅವರನ್ನು ಬಂಧಿಸಲಾಗಿತ್ತು. ಅವರ ಹೇಳಿಕೆ ಹಿಂಸಾಚಾರಕ್ಕೆ ಎಡೆ ಮಾಡಿದೆ ಎಂಬುದು ಪೊಲೀಸರ ಆರೋಪವಾಗಿದೆ.

ಪ್ರಕರಣ ಸಂಬಂಧ ಈವರೆಗೆ 15 ಹೋರಾಟಗಾರರನ್ನು ಬಂಧಿಸಲಾಗಿದ್ದು, ಐದು ಮಂದಿ ಜಾಮೀನು ಪಡೆದು ಹೊರಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT