ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್ ಬಂಧನ: ಸಿಬಿಐಗೆ ದೆಹಲಿ ಹೈಕೋರ್ಟ್‌ ನೋಟಿಸ್

Published 2 ಜುಲೈ 2024, 16:38 IST
Last Updated 2 ಜುಲೈ 2024, 16:38 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ತಮ್ಮನ್ನು ಸಿಬಿಐ ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ಏಳು ದಿನಗಳ ಒಳಗೆ ಪ್ರತಿಕ್ರಿಯಿಸುವಂತೆ ಸಿಬಿಐಗೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಇದೇ ವೇಳೆ ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಿದ ಸಂಬಂಧ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಗುವುದು ಎಂದು ಕೇಜ್ರಿವಾಲ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಮೂರ್ತಿ ನೀನಾ ಬಸ್ವಾಲ್‌ ಕೃಷ್ಣ ಅವರು ಸಿಬಿಐಗೆ ನೋಟಿಸ್‌ ನೀಡಿದರು. ಸಿಬಿಐ ಪ್ರತಿಕ್ರಿಯೆ ಸಲ್ಲಿಸಿದ ಎರಡು ದಿನಗಳ ಒಳಗೆ ಕೇಜ್ರಿವಾಲ್‌ ಪರ ವಕೀಲರು ಪ್ರತಿಕ್ರಿಯೆ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಸಿಬಿಐ ತಮ್ಮನ್ನು ಬಂಧಿಸಿರುವುದರ ಕುರಿತು ಮಾತ್ರವಲ್ಲದೇ ವಿಚಾರಣಾ ನ್ಯಾಯಾಲಯವು ಈ ಸಂಬಂಧ ಜೂನ್‌ 26 ಮತ್ತು ಜೂನ್‌ 29ರಂದು ನೀಡಿದ ಆದೇಶವನ್ನೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಆದೇಶಗಳಲ್ಲಿ ಕೇಜ್ರಿವಾಲ್‌ ಅವರನ್ನು ಸಿಬಿಐ ವಶಕ್ಕೆ ನೀಡಲಾಗಿತ್ತು. ಜೊತೆಗೆ, ಜೂನ್‌ 29ರಂದು ಕೇಜ್ರಿವಾಲ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 12ರವರೆಗೆ ವಿಸ್ತರಿಸಲಾಗಿತ್ತು.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಕೇಜ್ರಿವಾಲ್‌ ವಿರುದ್ಧ ಸಿಬಿಐ ಎರಡು ವರ್ಷಗಳ ಹಿಂದೆ ದಾಖಲಿಸಿದ್ದ ಎಫ್‌ಐಆರ್‌ ಕುರಿತು ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು. ‘ಕೇಜ್ರಿವಾಲ್‌ ವಿರುದ್ಧ ಸಿಬಿಐ 2022ರಲ್ಲಿ ಎಫ್‌ಐಆರ್‌ ದಾಖಲಿಸಿದೆ. 2023ರ ಏಪ್ರಿಲ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್‌ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಮತ್ತೊಮ್ಮೆ ಸಿಬಿಐ ಕೇಜ್ರಿವಾಲ್‌ ಅವರಿಗೆ ನೋಟಿಸ್‌ ನೀಡಿಲ್ಲ. ಆದರೆ, ಈಗ ಜೂನ್‌ 26ಕ್ಕೆ ಬಂಧಿಸಲಾಗಿದೆ’ ಎಂದರು.

‘ಕೇಜ್ರಿವಾಲ್‌ ಅವರು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿ ಇದ್ದ ಸಂದರ್ಭದಲ್ಲಿ ಸಿಬಿಐ ಅವರನ್ನು ಬಂಧಿಸಿದೆ. ಹೀಗೆ ಬಂಧಿಸುವಾಗ, ಬಂಧನದ ವಾರಂಟ್‌ನಲ್ಲಿ ಯಾವುದೇ ಹೊಸ ಸಾಕ್ಷ್ಯವನ್ನು ಸಿಬಿಐ ನಮೂದಿಸಿಲ್ಲ. ಆದ್ದರಿಂದ ಕೇಜ್ರಿವಾಲ್‌ ಅವರನ್ನು ಕೂಡಲೇ ಬಂಧಿಸಿರುವುದಕ್ಕೆ ಕಾರಣಗಳೇ ಇಲ್ಲ’ ಎಂದರು.

‘ಕೇಜ್ರಿವಾಲ್ ಅವರ ವಿರುದ್ಧ ಸಿಬಿಐ ಈಗಾಗಲೇ ಹಲವು ಹಂತಗಳಲ್ಲಿ ಚಾರ್ಚ್‌ಶೀಟ್‌ ಸಲ್ಲಿಸಿದೆ. 2022ರ ನವೆಂಬರ್‌ 24, 2023ರ ಏಪ್ರಿಲ್‌ 25 ಹಾಗೂ 2023ರ ಜುಲೈ 6ರಂದು ಚಾರ್ಚ್‌ಶೀಟ್‌ ಸಲ್ಲಿಸಲಾಗಿದೆ. ಚಾರ್ಚ್‌ಶೀಟ್‌ನಲ್ಲಿ ಇರುವ ಅಂಶಗಳನ್ನೇ ರಿಮ್ಯಾಂಡ್‌ ಅರ್ಜಿಯಲ್ಲೂ ಸಿಬಿಐ ಉಲ್ಲೇಖಿಸಿದೆ’ ಎಂದು ಕೇಜ್ರಿವಾಲ್‌ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ಹೇಳಲಾಗಿದೆ. ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT