ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ನಾ ಸಾವಿನ ಪ್ರಕರಣ: ನಿರ್ಮಲಾ ಹೇಳಿಕೆಗೆ ಕೇರಳ ಎಡಪಕ್ಷಗಳ ಆಕ್ರೋಶ

ಅನ್ನಾ ಸಾವಿನ ಪ್ರಕರಣವನ್ನು ದೈವಿಕತೆ ಜೊತೆ ಸಮೀಕರಿಸಿದ್ದ ಸಚಿವೆ
Published : 23 ಸೆಪ್ಟೆಂಬರ್ 2024, 16:29 IST
Last Updated : 23 ಸೆಪ್ಟೆಂಬರ್ 2024, 16:29 IST
ಫಾಲೋ ಮಾಡಿ
Comments

ಕೊಚ್ಚಿ: ಅರ್ನೆಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಸಂಸ್ಥೆಯ ಉದ್ಯೋಗಿ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ ಸಾವಿನ ಪ್ರಕರಣ ಕುರಿತು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಈಚೆಗೆ ಚೆನ್ನೈನಲ್ಲಿ ನೀಡಿದ್ದ ಹೇಳಿಕೆಯನ್ನು ಕೇರಳದ ಆಡಳಿತಾರೂಢ ಸಿಪಿಎಂ ಖಂಡಿಸಿದೆ. ಜೊತೆಗೆ, ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಕಾರ್ಯಕ್ರಮವೊಂದರಲ್ಲಿ ಅನ್ನಾ ಸಾವಿನ ‍ಪ್ರಕರಣ ಉಲ್ಲೇಖಿಸಿ ಮಾತನಾಡಿದ್ದ ನಿರ್ಮಲಾ ಅವರು, ಕುಟುಂಬಗಳು ಮಕ್ಕಳಿಗೆ ದೈವತ್ವದ ಮೂಲಕ ಒತ್ತಡ ನಿರ್ವಹಿಸುವುದನ್ನು ಹೇಳಿಕೊಡಬೇಕು. ಮಕ್ಕಳು ವ್ಯಾಸಂಗ ಮಾಡಿ ಅಥವಾ ಉದ್ಯೋಗವನ್ನೇ ಮಾಡಲಿ, ಒತ್ತಡ ನಿರ್ವಹಿಸಲು ಅವರಿಗೆ ಅಂತಃಸ್ಥೈರ್ಯ ಬೇಕು. ಅದನ್ನು ದೈವಿಕತೆ ಮೂಲಕ ಮಾತ್ರವೇ ಸಾಧಿಸಲು ಸಾಧ್ಯ. ದೇವರನ್ನು ಆರಾಧಿಸುವ ಮೂಲಕ ಮಾತ್ರ ಆತ್ಮಶಕ್ತಿ ವೃದ್ಧಿಸಿಕೊಳ್ಳಲು ಸಾಧ್ಯ’ ಎಂದಿದ್ದರು.

ಇದನ್ನು ಕಟುವಾಗಿ ಖಂಡಿಸಿರುವ ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್‌ ರಿಯಾಸ್‌, ‘ನಿರ್ಮಲಾ ಅವರು ಉದ್ಯೋಗಿಗಳನ್ನು ಶೋಷಿಸುವ ಕಾರ್ಪೊರೆಟ್‌ ಕುಳಗಳ ರಕ್ಷಕರಾಗಿದ್ದಾರೆ. ದೇಶದಲ್ಲಿ ಒತ್ತಡ ಮತ್ತು ಶೋಷಣೆ ಕಾರಣಕ್ಕೆ ಕಾರ್ಪೊರೆಟ್‌ ಉದ್ಯೋಗಿಗಳು ಸಾವಿಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಿರ್ಮಲಾ ಅವರು ಉದ್ಯೋಗಿಗಳನ್ನು ಶೋಷಿಸುತ್ತಿರುವ ಕಾರ್ಪೊರೆಟ್‌ ಕುಳಗಳ ಪೋಷಕರಾಗಿದ್ದಾರೆ ಎಂದು ಅವರ ಮಾತಿನಿಂದಲೇ ತಿಳಿಯುತ್ತದೆ’ ಎಂದು ಹೇಳಿದ್ದಾರೆ.

ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಹರಿಯುವಂತೆ ಮಾಡಲು ನಿರ್ಮಲಾ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ರಿಯಾಸ್‌ ದೂರಿದ್ದಾರೆ. 

ಕಾಂಗ್ರೆಸ್‌ ಹಿರಿಯ ನಾಯಕ ರಮೇಶ್‌ ಚೆನ್ನಿತಲ ಕೂಡಾ ನಿರ್ಮಲಾ ಹೇಳಿಕೆಯನ್ನು ವಿರೋಧಿಸಿದ್ದಾರೆ. ಕಾರ್ಪೊರೆಟ್‌ ವಲಯದ ದುರಾಸೆಯೇ ಅನ್ನಾ ಸಾವಿಗೆ ಕಾರಣ ಎಂದಿರುವ ಅವರು, ಅನ್ನಾ ಕೆಲಸ ಮಾಡುತ್ತಿದ್ದ ಸ್ಥಳದ ವಾತಾವರಣದ ಬಗ್ಗೆ ಮಾತನಾಡುವ ಬದಲು ಸಚಿವರು ಅಕೆಯ ಪೋಷಕರನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.

ದೇವರನ್ನು ಪ್ರಾರ್ಥಿಸುವ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದಾಗಿದ್ದರೆ ಸರ್ಕಾರ ಮತ್ತು ಕಾನೂನುಗಳ ಅಗತ್ಯವಾದರೂ ಏನಿತ್ತು?
ರಮೇಶ್‌ ಚೆನ್ನಿತಲ, ಕಾಂಗ್ರೆಸ್‌ ಹಿರಿಯ ನಾಯಕ

ಅತಿಯಾದ ಕೆಲಸದ ಒತ್ತಡ, ಅಸುರಕ್ಷಿತ ವಾತಾವರಣದ ಕಾರಣದಿಂದ 26 ವರ್ಷ ವಯಸ್ಸಿನ ಅನ್ನಾ ಮೃತಪಟ್ಟಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. 

‘10 ದಿನಗಳಲ್ಲಿ ತನಿಖಾ ವರದಿ’

ನವದೆಹಲಿ: ಅರ್ನೆಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಸಂಸ್ಥೆಯ ಸಿಬ್ಬಂದಿ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ ಅವರ ಸಾವಿನ ತನಿಖಾ ವರದಿಯು ಇನ್ನು 10 ದಿನಗಳಲ್ಲಿ ಬರಲಿದೆ ಎಂದು ಕೇಂದ್ರ ಕಾರ್ಮಿಕರು ಮತ್ತು ಉದ್ಯೋಗ ಸಚಿವ ಮನ್‌ಸುಖ್‌ ಮಾಂಡವೀಯಾ ಅವರು ಸೋಮವಾರ ತಿಳಿಸಿದರು.

‘ಸಚಿವಾಲಯವು ರಾಜ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದೆ. ತನಿಖೆಗೆ ಆದೇಶ ನೀಡಲಾಗಿದೆ. ವರದಿ ಬಂದ ಬಳಿಕವೇ ಈ ಕುರಿತು ಪ್ರತಿಕ್ರಿಯೆ ನೀಡಲಾಗುವುದು. ಸಂಸ್ಥೆ ಕಡೆಯಿಂದ ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲಾಗುದುವುದು’ ಎಂದರು.

ಕಾರ್ಮಿಕರು ಮತ್ತು ಉದ್ಯೋಗ ಸಚಿವಾಲಯಕ್ಕೆ ಎರಡು ದಿನಗಳ ಕೆಳಗೆ ನೋಟಿಸ್‌ ನೀಡಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಅನ್ನಾ ಸಾವಿನ ಪ್ರಕರಣದ ತನಿಖೆ ಕುರಿತು ವರದಿ ನೀಡಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮಾಂಡವೀಯ ಹೀಗೆ ಹೇಳಿದ್ದಾರೆ. 

ರಮೇಶ್‌ ಚೆನ್ನಿತಲ
ರಮೇಶ್‌ ಚೆನ್ನಿತಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT