ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಮಾರ್ಚ್ 6ರಂದು ರೈತರ ಚಳವಳಿ; 10ರಂದು ದೇಶದಾದ್ಯಂತ ರೈಲು ತಡೆ

ರೈತ ಮುಖಂಡರ ಘೋಷಣೆ
Published 3 ಮಾರ್ಚ್ 2024, 16:15 IST
Last Updated 3 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಚಂಡೀಗಢ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು ಖಾತರಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವ ರೈತರು ಇದೇ 6ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ, ಇದೇ 10ರಂದು ದೇಶದಾದ್ಯಂತ ನಾಲ್ಕು ಗಂಟೆ ರೈಲು ತಡೆ ನಡೆಸಲು ನಿರ್ಧರಿಸಿದ್ದಾರೆ.

ಈ ಪ್ರತಿಭಟನೆಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಮತ್ತು ರೈತ ಕಾರ್ಮಿಕರು ಪಾಲ್ಗೊಳ್ಳಬೇಕು ಎಂದು ರೈತ ಮುಖಂಡರಾದ ಸರವಣ ಸಿಂಗ್‌ ಪಂಢೇರ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಭಾನುವಾರ ಕರೆ ನೀಡಿದ್ದಾರೆ.

ಖನೌರಿಯಲ್ಲಿ ಹರಿಯಾಣದ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯಲ್ಲಿ ಇತ್ತೀಚೆಗೆ ಮೃತಪಟ್ಟ ರೈತ ಶುಭಕರಣ್‌ ಸಿಂಗ್‌ ಅವರ ಸ್ವಗ್ರಾಮವಾದ ಬಠಿಂಡಾ ಜಿಲ್ಲೆಯ ಬಲ್ಲೋಹ್‌ನಲ್ಲಿ ಈ ಇಬ್ಬರೂ ನಾಯಕರು ರೈತರನ್ನು ಉದ್ದೇಶಿಸಿ ಮಾತನಾಡಿದರು.

‘ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ತಲುಪಲು ಸಾಧ್ಯವಾಗದ ದೂರದ ರಾಜ್ಯಗಳ ರೈತರು, ರೈಲುಗಳಲ್ಲಿ ಮತ್ತು ಇತರ ಸಾರಿಗೆ ವ್ಯವಸ್ಥೆಯ ಮೂಲಕ ಇದೇ 6ರಂದು ದೆಹಲಿ ತಲುಪಬೇಕು. ಟ್ರ್ಯಾಕ್ಟರ್ ಟ್ರಾಲಿಗಳಿಲ್ಲದೆ ಬರುವ ರೈತರಿಗೆ ಸರ್ಕಾರವು ದೆಹಲಿ ಪ್ರವೇಶಿಸಲು ಅನುಮತಿ ನೀಡುತ್ತದೆಯೇ ಎಂಬುದು ಆಗ ಸ್ಪಷ್ಟವಾಗಲಿದೆ’ ಎಂದರು.

4 ಗಂಟೆ ರೈಲು ತಡೆ: ಮಾರ್ಚ್ 10ರಂದು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ದೇಶದಾದ್ಯಂತ ರೈಲು ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಪಂಢೇರ ವಿವರಿಸಿದರು.

‘ಪಂಜಾಬ್‌ನ ಎಲ್ಲಾ ಪಂಚಾಯಿತಿಗಳು ರೈತರ ಬೇಡಿಕೆಗಳನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಬೇಕು. ಪ್ರತಿ ಹಳ್ಳಿಯಿಂದ ಬರುವ ಟ್ರ್ಯಾಕ್ಟರ್ ಟ್ರಾಲಿಗಳು ಪ್ರತಿಭಟನೆ ನಡೆಯುತ್ತಿರುವ ಗಡಿ ಸ್ಥಳಗಳನ್ನು ತಲುಪುತ್ತವೆ. ಶಂಭು ಮತ್ತು ಖನೌರಿಯಲ್ಲಿ ಪ್ರತಿಭಟನೆಯು ಮೊದಲಿನಂತೆ ಮುಂದುವರಿಯಲಿದೆ. ಅಲ್ಲದೆ, ಮತ್ತಷ್ಟು ತೀವ್ರಗೊಳ್ಳಲಿದೆ. ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಚಳವಳಿ ನಿಲ್ಲುವುದಿಲ್ಲ’ ಎಂದು ಅವರು ತಿಳಿಸಿದರು.

ರೈತರ ಸಮಸ್ಯೆ ಪರಿಹರಿಸಲು ಕೇಂದ್ರಕ್ಕೆ ಇಷ್ಟವಿಲ್ಲ. ಹೀಗಾಗಿಯೇ ರೈತರನ್ನು ಒಡೆದು ಆಳುವ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ರೈತರು ಮತ್ತು ಕೃಷಿ ಕಾರ್ಮಿಕರು ಬಿಜೆಪಿಯ ಕಾರ್ಯಸೂಚಿಯಲ್ಲಿ ಇಲ್ಲ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT