ಉಜ್ಜಯಿನಿ: ಪ್ರಸಿದ್ಧ ಮಹಾಕಾಳ ದೇವಾಲಯದ ಎದುರಿನ ಶಾಲೆಯ ಕಾಂಪೌಂಡ್ ಭಾರಿ ಮಳೆಯಿಂದಾಗಿ ಕುಸಿದು ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿರುವ ದುರಂತ ಶುಕ್ರವಾರ ಸಂಜೆ ಸಂಭವಿಸಿದೆ.
'ಮಹಾರಾಜವಾಡ ಶಾಲೆಯ ಕಾಂಪೌಂಡ್‌ನ ಒಂದು ಭಾಗ ಕುಸಿದಿದ್ದು, ನಾಲ್ವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿ, ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು' ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ನೀರಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
'ಸಂತ್ರಸ್ತರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬದುಕುಳಿದಿರುವ ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆ ಸಲುವಾಗಿ ಇಂದೋರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ಮುಂದುವರಿದು, 'ಮೃತರ ಕುಟುಂಬದವರಿಗೆ ತಲಾ ₹ 4 ಲಕ್ಷ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ಸಲುವಾಗಿ ತಲಾ ₹ 50,000 ನೆರವು ಘೊಷಿಸಲಾಗಿದೆ' ಎಂದೂ ತಿಳಿಸಿದ್ದಾರೆ.
ಮೃತರನ್ನು ಫರ್ಹೀನ್ (22), ಅಜಯ್ ಯೋಗಿ (27) ಎಂದು ಗುರುತಿಸಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.