ಗುರುಗ್ರಾಮ/ಪಲ್ವಾಲ್ : ಹರಿಯಾಣ ರಾಜ್ಯದ ಪಲ್ವಾಲ್‌ನಲ್ಲಿ ಆಗಸ್ಟ್ 13ರಂದು ನಡೆದ ‘ಸರ್ವ ಹಿಂದೂ ಸಮಾಜ ಮಹಾ ಪಂಚಾಯತ್’ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಅಪರಿಚತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಪಲ್ವಾಲ್‌ನ ಪೊಂಡ್ರಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕೆಲವರು ಅನ್ಯ ಸಮುದಾಯದವರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಪ್ರೊಬೇಷನರಿ ಪಿಎಸ್‌ಐ ಸಚಿನ್ ಅವರು ನೀಡಿದ ದೂರಿನ ಆಧಾರದ ಮೇಲೆ ಹಾಥಿನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 153ಎ ಮತ್ತು 505 ಅನ್ನು ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಹೇಳಿದ್ದಾರೆ.
ನೂಹ್‌ನಲ್ಲಿ ಜುಲೈ 31ರಂದು ನಡೆಯುತ್ತಿದ್ದ ವಿಎಚ್‌ಪಿಯ ಬ್ರಜ್ ಮಂಡಲ್ ಯಾತ್ರೆಯ ಮೇಲೆ ದಾಳಿ ನಡೆದಿತ್ತು. ಇದರಿಂದ ಯಾತ್ರೆಗೆ ಅಡ್ಡಿಯಾಗಿತ್ತು. ಈ ಯಾತ್ರೆಯನ್ನು ಇದೇ 28ರಂದು ನಡೆಸಲು ಹಿಂದೂ ಸಂಘಟನೆಗಳ ‘ಮಹಾ ಪಂಚಾಯತ್’ ನಿರ್ಧಾರ ತೆಗೆದುಕೊಂಡಿತ್ತು. ಅಲ್ಲದೆ ಯಾತ್ರೆ ವೇಳೆ ನಡೆದ ದಾಳಿಯ ಕುರಿತು ಎನ್‌ಐಎ ತನಿಖೆ ನಡೆಸಬೇಕು ಮತ್ತು ನೂಹ್ ಅನ್ನು ಗೋ ಹತ್ಯೆ ಮುಕ್ತ ಜಿಲ್ಲೆಯೆಂದು ಘೋಷಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿತ್ತು.
ಮುಸ್ಲಿಂ ಪ್ರಾಬಲ್ಯದ ಜಿಲ್ಲೆಯಾದ ನೂಹ್‌ನಲ್ಲಿರುವ ಹಿಂದೂಗಳಿಗೆ, ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆಯುವಲ್ಲಿ ನಿಯಮ ಸಡಿಲಿಸಬೇಕು ಎಂದು ಸಭೆಯಲ್ಲಿ ಕೆಲ ಹಿಂದೂ ಮುಖಂಡರು ಒತ್ತಾಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.