ಕೆವಾಡಿಯಾ(ಗುಜರಾತ್): ‘ಏಕತಾ ಪ್ರತಿಮೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಯಾವ ಗಳಿಗೆಯಲ್ಲಾದರೂ ಬೀಳಬಹುದು’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಅಪರಿಚಿತ ವ್ಯಕ್ತಿ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸೆಪ್ಟೆಂಬರ್ 8ರ ಬೆಳಿಗ್ಗೆ ಸುಮಾರು 9.52ರ ವೇಳೆ ‘RaGa4India’ ಎಂಬ ಹೆಸರಿನ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಪೋಸ್ಟ್ ಅನ್ನು ಹಿಂದಿಯಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಏಕತಾ ಪ್ರತಿಮೆ ಪ್ರದೇಶ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಆಡಳಿತ ಪ್ರಾಧಿಕಾರದ ಘಟಕ-1ರ ಡೆಪ್ಯುಟಿ ಕಲೆಕ್ಟರ್ ಅಭಿಷೇಕ್ ರಂಜನ್ ಸಿನ್ಹಾ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರಲ್ಲಿ ಭಯ ಮೂಡಿಸಿ ಶಾಂತಿ ಕದಡುವ ಪ್ರಯತ್ನ ನಡೆದಿದೆ’ ಎಂದು ಎಫ್‌ಐಆರ್‌ನಲ್ಲಿ ಸಿನ್ಹಾ ಉಲ್ಲೇಖಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 353(1) ಅಡಿ ಪ್ರಕರಣ ದಾಖಲಾಗಿದೆ.
ಸ್ವತಂತ್ರ ಭಾರತದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥ ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ 182 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸಲಾಗಿದ್ದು, 2018ರ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ಇದು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.