ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳ | ಹಳಿತಪ್ಪಿದ ಪೆಟ್ರೋಲ್ ಸಾಗಿಸುತ್ತಿದ್ದ ಗೂಡ್ಸ್ ರೈಲು

Published 9 ಆಗಸ್ಟ್ 2024, 9:30 IST
Last Updated 9 ಆಗಸ್ಟ್ 2024, 9:30 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕುಮೇದ್‌ಪುರ ರೈಲ್ವೆ ನಿಲ್ದಾಣದಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನ 5 ಟ್ಯಾಂಕರ್‌ಗಳು ಹಳಿತಪ್ಪಿದ್ದು, ಯಾರಿಗೂ ಗಾಯಗಳಾಗಿಲ್ಲ.

ಬೆಳಿಗ್ಗೆ 10.45ರ ಸುಮಾರಿಗೆ ರೈಲು ಹಳಿ ತಪ್ಪಿದೆ ಎಂದು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸವ್ಯಸಾಚಿ ಡೇ ತಿಳಿಸಿದ್ದಾರೆ.

ಕತಿಹಾರ್ ವಿಭಾಗದ ಕುಮೇದ್‌ಪುರ ರೈಲ್ವೆ ನಿಲ್ದಾಣದಲ್ಲಿ ಹಾದುಹೋಗುವ ಸಂದರ್ಭ ಗೂಡ್ಸ್ ರೈಲು (DN IORG/BTPN/LD 70649) ಹಳಿ ತಪ್ಪಿದೆ. ಈ ಸಂದರ್ಭ ರೈಲ್ವೆಯ ಪ್ರಮುಖ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.

‘ಕೂಡಲೇ ಅಪಘಾತ ಪರಿಹಾರ ರೈಲನ್ನು(ಎಆರ್‌ಟಿ) ಸ್ಥಳಕ್ಕೆ ಕರೆಸಲಾಗಿದ್ದು, ಹಳಿ ದುರಸ್ತಿ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಘಟನೆ ಬಳಿಕ ಒಂದು ಪ್ಯಾಸೆಂಜರ್ ರೈಲು ನಡುರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಅದನ್ನು ಕತಿಹಾರ್‌ಗೆ ವಾಪಸ್ ಕರೆಸಿಕೊಳ್ಳಲಾಗಿದ್ದು, ಹಳಿ ದುರಸ್ತಿ ಬಳಿಕ ಸಂಚಾರ ಮತ್ತೆ ಆರಂಭವಾಗಲಿದೆ’ಎಂದು ಅವರು ತಿಳಿಸಿದ್ದಾರೆ.

ಹಳಿಯಲ್ಲಿನ ದೋಷದಿಂದಾಗಿ ಅಪಘಾತ ಸಂಭವಿಸಿರಬಹುದು. ಕೂಲಂಕಷ ತನಿಖೆ ಬಳಿಕ ಕಾರಣ ತಿಳಿದುಬರಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಪೆಟ್ರೋಲ್ ಹೊತ್ತು ಸಾಗುತ್ತಿದ್ದ ಗೂಡ್ಸ್ ರೈಲು ಪಶ್ಚಿಮ ಬಂಗಾಳದ ನ್ಯೂ ಜಲಪಾಯ್‌ಗುರಿಯಿಂದ ಬಿಹಾರದ ಕತಿಹಾರ್‌ಗೆ ತೆರಳುತ್ತಿತ್ತು ಎಂದು ಕತಿಹಾರ್ ವಿಭಾಗದ ರೈಲ್ವೆ ವ್ಯವಸ್ಥಾಪಕ ಸುರೇಂದ್ರ ಕುಮಾರ್ ಹೇಳಿದ್ದಾರೆ.

‘ಪಶ್ಚಿಮ ಬಂಗಾಳದ ನ್ಯೂ ಜಲಪಾಯ್‌ಗುರಿಯಿಂದ ಬಿಹಾರದ ಕತಿಹಾರ್‌ಗೆ ಪೆಟ್ರೋಲ್ ಹೊತ್ತು ಸಾಗುತ್ತಿದ್ದ ಗೂಡ್ಸ್ ರೈಲಿನ 5 ಟ್ಯಾಂಕರ್ ಕುಮೇದ್‌ಪುರ ರೈಲ್ವೆ ನಿಲ್ದಾಣದಲ್ಲಿ ಹಳಿತಪ್ಪಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವೇ ಸಮಯದಲ್ಲಿ ಹಳಿ ದುರಸ್ತಿ ಮಾಡಿ ಸಂಚಾರಕ್ಕೆ ಅನುವುಮಾಡಿಕೊಡಲಾಗುವುದು’ಎಂದು ಕುಮಾರ್ ಹೇಳಿದ್ದಾರೆ.

‘ಅಪಘಾತಕ್ಕೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ’ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT