ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ: ವಿಷಾಹಾರ ಸೇವಿಸಿ 250 ವಿದ್ಯಾರ್ಥಿಗಳು ಅಸ್ವಸ್ಥ

Published : 7 ಆಗಸ್ಟ್ 2024, 6:12 IST
Last Updated : 7 ಆಗಸ್ಟ್ 2024, 6:12 IST
ಫಾಲೋ ಮಾಡಿ
Comments

ಪಾಲ್ಗರ್: ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿರುವ ಆಶ್ರಮ ಶಾಲೆಯೊಂದರ (ಬುಡಕಟ್ಟು ವಿದ್ಯಾರ್ಥಿಗಳ ವಸತಿ ಶಾಲೆ) 250 ವಿದ್ಯಾರ್ಥಿಗಳು ‌ವಿಷಪೂರಿತ ಆಹಾರ ಸೇರಿಸಿ ಅಸ್ವಸ್ಥರಾಗಿದ್ದಾರೆ. ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ, ಧನಾವ್ ತಾಲ್ಲೂಕಿನ 20 ಆಶ್ರಮ ಶಾಲೆಗಳ 250 ವಿದ್ಯಾರ್ಥಿಗಳು ವಿಷಾಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಶೀಘ್ರವೇ ಶಿಕ್ಷಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸೋಮವಾರದ ರಾತ್ರಿ ಭೋಜನಕ್ಕೆ ಕಲಂಗಾವ್‌ನ ಸೆಂಟ್ರಲ್ ಕಿಚನ್‌ನಿಂದ ತರಿಸಲಾಗಿದ್ದ ಆಹಾರ ಸೇವಿಸಿದ ಒಂದೆರಡು ಗಂಟೆಯಲ್ಲಿ ವಿದ್ಯಾರ್ಥಿಗಳಲ್ಲಿ ವಾಕರಿಕೆ, ವಾಂತಿ ಮತ್ತು ತಲೆತಿರುಗುವಿಕೆಯಂತಹ ಲಕ್ಷಣಗಳು ಕಂಡು ಬಂದಿವೆ.

‘ಸುಮಾರು 150 ವಿದ್ಯಾರ್ಥಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಯಾರಿಗೂ ಗಂಭೀರ ಅಸ್ವಸ್ಥತೆ ಉಂಟಾಗಿಲ್ಲ’ ಎಂದು ಧನಾವ್‌ನ ಬುಡಕಟ್ಟು ಅಭಿವೃದ್ಧಿ ಯೋಜನೆಯ ಅಧಿಕಾರಿ ಡಾ. ಸತ್ಯಂ ಗಾಂಧಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದಕೊಳ್ಳುವಂತೆ ಬುಡಕಟ್ಟು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಶ್ರಮ ಶಾಲೆಗೆ ಸರಬರಾಜು ಮಾಡಲಾದ ಆಹಾರದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರ ಫಲಿತಾಂಶ ಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ, ಹಿರಿಯ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಲಾಗಿದೆ. ಸೆಂಟ್ರಲ್‌ ಕಿಚನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ಬೊಡ್ಕೆ ತಿಳಿಸಿದ್ದಾರೆ.

ರಾಜ್ಯ ಆಹಾರ ಹಾಗೂ ಔಷಧ ಆಡಳಿತ (ಎಫ್‌ಡಿಎ) ಹಾಗೂ ಪೊಲೀಸ್ ಸಿಬ್ಬಂದಿ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್‌ ಘಟನೆ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT