ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಮಾ ಸಮಿತಿ ವರದಿ| ವಿಶೇಷ ತಂಡ ರಚಿಸಿ: ಯುಡಿಎಫ್‌ ಒತ್ತಾಯ

ಮಲಯಾಳ ಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯ: ತನಿಖೆಗೆ ಯುಡಿಎಫ್‌ ಒತ್ತಾಯ
Published 23 ಆಗಸ್ಟ್ 2024, 13:35 IST
Last Updated 23 ಆಗಸ್ಟ್ 2024, 13:35 IST
ಅಕ್ಷರ ಗಾತ್ರ

ತಿರುವನಂತಪುರ: ನ್ಯಾಯಮೂರ್ತಿ ಕೆ.ಹೇಮಾ ಸಮಿತಿಯ ವರದಿಯಲ್ಲಿ ಪ್ರಸ್ತಾಪವಾಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವಂತೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಶುಕ್ರವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದೆ.

ಆದರೆ ಸಮಿತಿಯ ವರದಿ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲು ಸಾಧ್ಯವಿಲ್ಲ ಎಂದು ಸಿಪಿಎಂ ಹೇಳಿದೆ.

ಲೈಂಗಿಕ ಕಿರುಕುಳ, ಶೋಷಣೆ, ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಸಂತ್ರಸ್ತರು ನೀಡಿದ ಹೇಳಿಕೆಗಳು ಹಾಗೂ ಪುರಾವೆಗಳ ಆಧಾರದ ಮೇಲೆ ತನಿಖೆ ನಡೆಸಲು ಮಹಿಳಾ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಬೇಕು ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಮುಖ್ಯಮಂತ್ರಿ ವಿಜಯನ್ ಮತ್ತು ಸಂಸ್ಕೃತಿ ಸಚಿವರಾದ ಸಜಿ ಚೆರಿಯನ್ ಅವರಿಗೆ ಪತ್ರ ಬರೆದಿದ್ದಾರೆ.

‘ಸಮಿತಿಯ ವರದಿ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳು ತೀರ್ಪು ನೀಡಿವೆ’ ಎಂದು ಸಿಪಿಎಂನ ಹಿರಿಯ ನಾಯಕ ಎ.ಕೆ. ಬಾಲನ್ ಹೇಳಿದ್ದಾರೆ.

‘ಇದು ಉಮ್ಮನ್‌ ಚಾಂಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು. ಆದ್ದರಿಂದ ಸಮಿತಿಯ ವರದಿ ಆಧಾರದ ಮೇಲೆ ರಾಜ್ಯ ಸರ್ಕಾರವು ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ವರದಿ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ನಾನು ಪ್ರತಿಕ್ರಿಯೆ ನೀಡಿದ್ದೇವೆ. ಅದಕ್ಕಿಂತ ಹೆಚ್ಚಿನದ್ದನ್ನು ಹೇಳಲಾಗಲ್ಲ. ಈ ವಿಷಯ ಕೇರಳ ಹೈಕೋರ್ಟ್‌ನಲ್ಲಿದೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಸ್ಕೃತಿ ಸಚಿವ ಸಜಿ ಚೆರಿಯನ್ ತಿಳಿಸಿದ್ದಾರೆ.

‘ಈ ಹಿಂದೆ ಆಯೋಗಕ್ಕೆ ಸಲ್ಲಿಕೆಯಾಗಿದ್ದ ದೂರುಗಳು ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಸಮಿತಿಯ ವರದಿಗಳ ಆಧಾರದ ಮೇಲೆ ಮಲಯಾಳ ಚಿತ್ರೋದ್ಯಮದಲ್ಲಿ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯಾಗಿದೆ ಎಂಬುದು ಕಂಡುಬರುತ್ತಿದೆ. ಇದನ್ನು ಪರಿಶೀಲಿಸಬೇಕಿದೆ’ ಎಂದು ಕೇರಳ ಮಾನವ ಹಕ್ಕುಗಳ ಆಯೋಗ (ಕೆಎಚ್‌ಆರ್‌ಸಿ) ಹೇಳಿದೆ.

ವರದಿ ಕುರಿತಂತೆ ಸರ್ಕಾರ ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೆಎಚ್‌ಆರ್‌ಸಿಯ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖವಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಣ್ಣೂರು ಮೂಲದ ವಕೀಲರು ನೀಡಿದ ದೂರಿನ ಮೇರೆಗೆ ಆಯೋಗ ನಿರ್ದೇಶನ ನೀಡಿದೆ. ಗಂಭೀರ ಅಪರಾಧಗಳನ್ನು ಎಸಗಲಾಗಿದೆ ಎಂದು ವರದಿ ದಾಖಲಿಸಿದೆ ಎಂದು ವಿರೋಧ ಪಕ್ಷದ ನಾಯಕ ಸತೀಶನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT