ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20: ಭವಿಷ್ಯದ ಪೀಳಿಗೆಯ ಏಳಿಗೆಗೆ ಈಗಿನ ಹೊಣೆಗಾರಿಕೆ ನೆನಪಿಸಿದ ಪ್ರಧಾನಿ ಮೋದಿ

Published 9 ಸೆಪ್ಟೆಂಬರ್ 2023, 6:27 IST
Last Updated 9 ಸೆಪ್ಟೆಂಬರ್ 2023, 6:27 IST
ಅಕ್ಷರ ಗಾತ್ರ

ನವದೆಹಲಿ: ‘ಭವಿಷ್ಯದ ಪೀಳಿಗೆಗೆ ಸುಂದರ ಜಗತ್ತನ್ನು ನೀಡುವ ಹೊಣೆಗಾರಿಕೆ ವರ್ತಮಾನದಲ್ಲಿರುವವರ ಮೇಲಿದ್ದು, ಅದನ್ನು ಸಾಕಾರಗೊಳಿಸಲು ಎಲ್ಲರೊಂದಿಗೆ ಎಲ್ಲರ ಏಳಿಗೆ, ಎಲ್ಲರ ವಿಶ್ವಾಸ ಮತ್ತು ಪ್ರತಿಯೊಬ್ಬರ ಪ್ರಯತ್ನ (ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ವಿಶ್ವಾಸ್, ಸಬ್‌ ಕಾ ಪ್ರಯಾಸ್‌)ದಿಂದ ಸಾಧ್ಯವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಜಿ20 ಶೃಂಗದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದ ಅವರು, ‘ಮಾನವರ ಕಲ್ಯಾಣ ಹಾಗೂ ಸುಖವು ಸದಾ ಖಾತ್ರಿಯಾಗಿರಬೇಕು’ ಎಂದು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಭಾರತ ಇಡೀ ಜಗತ್ತಿಗೆ ಸಾರಿದೆ. ಈ ಸಾಲುಗಳನ್ನು ನೆನಪಿಸಿಕೊಳ್ಳುತ್ತ, 21ನೇ ಶತಮಾನದಲ್ಲಿ ಇಡೀ ಜಗತ್ತಿಗೆ ಹೊಸ ಆಯಾಮ ನೀಡುವ ಮಹತ್ವಪೂರ್ಣ ಸಮಯವನ್ನು ಸದ್ಬಳಕೆ ಮಾಡಿಕೊಳ್ಳೋಣ’ ಎಂದರು.

‘ಕಳೆದ ಹಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಹೊಸ ಆಯಾಮದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಮಾನವತೆಯನ್ನು ಕೇಂದ್ರೀಕರಿಸಿಕೊಂಡು ಹೊಸ ದಿಕ್ಕಿನೆಡೆಗೆ ಸಾಗಬೇಕಾಗಿದೆ’ ಎಂದು ಮೋದಿ ವಿಶ್ವ ನಾಯಕರಿಗೆ ಹೇಳಿದರು.

‘ಕೋವಿಡ್ ನಂತರದಲ್ಲಿ ದೊಡ್ಡ ರೀತಿಯ ಸಂಕಷ್ಟ ಇಡೀ ಜಗತ್ತನ್ನು ಕಾಡುತ್ತಿದೆ. ಕೋವಿಡ್‌ ಹಿಮ್ಮೆಟ್ಟಿಸುವುದು ಸಾಧ್ಯವಾಗಲಿದೆಯಾದರೆ, ನಾವು ಈಗ ಎದುರಿಸುತ್ತಿರುವ ಸಂಕಷ್ಟಗಳನ್ನೂ ನಿವಾರಿಸಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಹೊಂದಬೇಕಾಗಿದೆ. ಆದರೆ ನಡೆಯುತ್ತಿರುವ ಯುದ್ಧಗಳು ಜಗತ್ತಿನಲ್ಲಿ ವಿಶ್ವಾಸದ ಕೊರತೆಯನ್ನು ಸೂಚಿಸುತ್ತಿವೆ’ ಎಂದು ರಷ್ಯಾ–ಉಕ್ರೇನ್ ನಡುವಿನ ಯುದ್ಧ ಕುರಿತು ಪರೋಕ್ಷವಾಗಿ ಹೇಳಿದರು.

‘ಜಗತ್ತಿನಲ್ಲಿ ದೇಶಗಳ ನಡುವೆ ಆರ್ಥಿಕ ಅಸಮಾನತೆ ಇದೆ. ಉತ್ತರ ಹಾಗೂ ದಕ್ಷಿಣ ಎಂಬ ವಿಭಜನೆ ಇದೆ. ಪೂರ್ವ ಹಾಗೂ ಪಶ್ಚಿಮಗಳೂ ದೂರ ಎಂಬ ಭಾವನೆ... ಇವೆಲ್ಲವನ್ನೂ ಉತ್ತಮ ಸಂಬಂಧಗಳ ಮೂಲಕ ಹತ್ತಿರವಾಗಿಸಲು ಸಾಧ್ಯವಿದೆ. ಆಹಾರ, ತೈಲದ ಅಭಾವ, ಭಯೋತ್ಪಾದನೆ ಮತ್ತು ಸೈಬರ್ ಸುರಕ್ಷತೆ, ಆರೋಗ್ಯ, ಇಂಧನ, ನೀರಿನ ಭದ್ರತೆ ಹೀಗೆ ಭವಿಷ್ಯದ ಪೀಳಿಗೆಗಳಿಗೆ ಇವೆಲ್ಲವೂ ಸಿಗಬೇಕಾದಲ್ಲಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಸಾಗಬೇಕಿದೆ’ ಎಂದರು.

ಭಾರತದಲ್ಲಿ ಜಿ20 ಶೃಂಗ ಆಯೋಜನೆಗೊಂಡಿರುವುದರಿಂದ ದೇಶದ ಒಳಗೆ ಹಾಗೂ ದೇಶದ ಹೊರಗೆ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ನಡೆದಿದೆ. ಇಡೀ ದೇಶದ 140 ಕೋಟಿ ಜನ ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡಿದ್ದಾರೆ. ದೇಶದ 70ಕ್ಕೂ ಹೆಚ್ಚು ನಗರಗಳಲ್ಲಿ 200ಕ್ಕೂ ಅಧಿಕ ಸಮಾವೇಶಗಳು ನಡೆದಿವೆ’ ಎಂದು ಮೋದಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಆಫ್ರಿಕಾದ ಒಕ್ಕೂಟಕ್ಕೆ ಜಿ20ರ ಸ್ಥಾಯಿ ಸದಸ್ಯತ್ವ ನೀಡಬೇಕು ಎಂಬ ಪ್ರಸ್ತಾಪವನ್ನು ಪ್ರಧಾನಿ ಮೋದಿ ಮುಂದಿಟ್ಟರು. ವಿಶ್ವ ನಾಯಕರ ಒಪ್ಪಿಗೆಯಂತೆ ಆಫ್ರಿಕಾದ ಒಕ್ಕೂಟದ ಪ್ರತಿನಿಧಿಯನ್ನು ಸಭೆಗೆ ಆಹ್ವಾನಿಸಿದರು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಒಕ್ಕೂಟದ ಪ್ರತಿನಿಧಿಯನ್ನು ಕರೆತಂದರೆ, ಪ್ರಧಾನಿ ಮೋದಿ ಅವರನ್ನು ಆಲಂಗಿಸಿ, ಡುಬ್ಬ ಚಪ್ಪರಿಸಿ ನಿಗದಿತ ಆಸನದಲ್ಲಿ ಕೂರಿಸಿದರು.

ಮಾತು ಆರಂಭಕ್ಕೂ ಮೊದಲು, ಮೊರಾಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಜಿ20 ರಾಷ್ಟ್ರಗಳ ಪರವಾಗಿ ಅಧ್ಯಕ್ಷತೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದರು. ಮೊರಾಕೊ ಜನರ ನೆರವಿಗೆ ಎಲ್ಲಾ ರಾಷ್ಟ್ರಗಳು ಸದಾ ಸಿದ್ಧ. ಇಡೀ ವಿಶ್ವವೇ ಮೊರಾಕೊ ಜತೆಗಿದೆ ಎಂದರು.

ಜಿ20 ಶೃಂಗಕ್ಕೆ ಬಂದಿರುವ ಮುಖಂಡರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊನಾರ್ಕ್‌ನ ಕಲ್ಲಿನ ಚಕ್ರದ ಪ್ರತಿಕೃತಿ ಇರುವ ಗೋಡೆಯ ಬಳಿ ಸ್ವಾಗತಿಸಿದರು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೂರುವ ಆಸನಕ್ಕೆ ‘ಭಾರತ್‌’ ಎಂದು ಬರೆದಿರುವುದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT