ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌ ಪತನ: ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್‌ ಸೇರಿ 13 ಮಂದಿ ಸಾವು

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ನಡೆದ ದುರಂತ
Last Updated 8 ಡಿಸೆಂಬರ್ 2021, 21:18 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ ಪತನ ಗೊಂಡಿತು. ಈ ದುರಂತದಲ್ಲಿ, ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್ ರಾವತ್‌ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.

ರಾವತ್‌, 2019ರಲ್ಲಿ ಭಾರತದ ಸೇನಾಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಬಿಪಿನ್ ರಾವತ್ ಅವರು, ಈ ಸ್ವರೂಪದ ಅಪಘಾತದಲ್ಲಿ ಮೃತಪಟ್ಟ ಸೇನೆಯ ಮೊದಲ ಅತ್ಯುನ್ನತ ಅಧಿಕಾರಿ.

ರಾವತ್ ಅವರು ವೆಲ್ಲಿಂಗ್‌ಟನ್‌ನಲ್ಲಿನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದರು.

ವೆಲ್ಲಿಂಗ್‌ಟನ್‌ನಿಂದ 88 ಕಿ.ಮೀ. ದೂರದಲ್ಲಿರುವ ಸೂಲೂರಿಗೆರಾವತ್ ದಂಪತಿಯು ದೆಹಲಿಯಿಂದ ವಾಯುಪಡೆಯ ವಿಮಾನದ ಮೂಲಕ ಬುಧವಾರ ಬೆಳಿಗ್ಗೆ ಬಂದಿಳಿದಿದ್ದರು. ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ವೆಲ್ಲಿಂಗ್‌ಟನ್‌ಗೆ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದರು. ವೆಲ್ಲಿಂಗ್‌ಟನ್ ಹೆಲಿಪ್ಯಾಡ್‌ನಿಂದ ಕೆಲವೇ ಕಿಲೊಮೀಟರ್‌ ದೂರದಲ್ಲಿದ್ದಾಗ, ಕೂನೂರಿನ ಬಳಿ ಹೆಲಿಕಾಪ್ಟರ್‌ ಪತನವಾಗಿದೆ. ಕೂನೂರಿನ ಹೊರವಲಯದಲ್ಲಿದ್ದ ಮನೆಗಳಿಂದ ಕೆಲವೇ ಅಡಿ ದೂರದಲ್ಲಿ ಹೆಲಿಕಾಪ್ಟರ್‌ ನೆಲಕ್ಕೆ ಅಪ್ಪಳಿಸಿದೆ.

ಅವಘಡದಲ್ಲಿ ಬದುಕುಳಿದಿದ್ದ ಇಬ್ಬರನ್ನು ವೆಲ್ಲಿಂಗ್‌ಟನ್ ಸೇನಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಮೃತಪಟ್ಟಿದ್ದಾರೆ. ಬದುಕುಳಿದಿರುವ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.

‘ಹೆಲಿಕಾಪ್ಟರ್‌ ಹಾರಾಡುತ್ತಿದ್ದಾ ಗಲೇ ಅದಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ನಂತರ ನೆಲಕ್ಕೆ ಅಪ್ಪಳಿಸಿತು’ ಎಂದು
ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹೆಲಿ ಕಾಪ್ಟರ್‌ ಪತನಕ್ಕೆ ನಿಖರ ಕಾರಣಗಳು ಪತ್ತೆಯಾಗಿಲ್ಲ. ಅವಘಡದ ಸಂಬಂಧ ವಾಯುಪಡೆಯು ಆಂತರಿಕ ತನಿಖೆಗೆ ಆದೇಶಿಸಿದೆ.

ಸಂಸದೀಯ ಸಮಿತಿ ಸಭೆ: ಅವಘಡದ ಕುರಿತು ಭದ್ರತಾ ವ್ಯವಹಾರಗಳ ಸಂಪುಟ ಸಮಿತಿಯು ಬುಧವಾರ ಸಭೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಪಡೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಏನನ್ನು ಚರ್ಚಿಸಲಾಯಿತು ಎಂಬುದನ್ನು ಸರ್ಕಾರವು ಬಹಿರಂಗಪಡಿಸಿಲ್ಲ.

ಬಿಪಿನ್ ರಾವತ್ ಅವರಿದ್ದ ಸಿಡಿಎಸ್‌ ಮುಖ್ಯಸ್ಥನ ಹುದ್ದೆ ಈಗ ತೆರವಾಗಿದ್ದು. ಆ ಹುದ್ದೆಗೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬುದರ ಬಗ್ಗೆ ಸರ್ಕಾರ ಯಾವ ಮಾಹಿತಿಯನ್ನೂ ನೀಡಿಲ್ಲ.

ವಿಡಿಯೊಗಳು ವೈರಲ್, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ:ನೆಲಕ್ಕೆ ಅಪ್ಪಳಿಸಿದ ನಂತರವೂ ಹೆಲಿಕಾಪ್ಟರ್‌ ಹೊತ್ತಿಉರಿಯುತ್ತಿತ್ತು. ಅದರಲ್ಲಿದ್ದವರು ಬೆಂಕಿಯಲ್ಲಿ ಉರಿಯುತ್ತಿರುವ,ಹೆಲಿಕಾಪ್ಟರ್ ಛಿದ್ರವಾಗಿರುವ,ಗಾಯಾಳುಗಳನ್ನು ಬೆಡ್‌ಶೀಟ್‌ನಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯಗಳಿರುವ ವಿಡಿಯೊ ಮತ್ತುರಕ್ಷಣಾ ಕಾರ್ಯಾಚರಣೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ‘ಇದು ಅತ್ಯಂತ ಸುರಕ್ಷಿತ ಹೆಲಿಕಾಪ್ಟರ್ ಆಗಿದ್ದು, ಹೇಗೆ ಪತನವಾಯಿತು?’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ. ಘಟನಾ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.

ಶುಕ್ರವಾರ ಅಂತ್ಯಕ್ರಿಯೆ

ಸಿಡಿಎಸ್‌ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆ ಶುಕ್ರವಾರ (ಡಿ.10) ನಡೆಸಲು ನಿರ್ಧರಿಸಲಾಗಿದೆ. ದೆಹಲಿಯ ಕಂಟೋನ್ಮೆಂಟ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಮಿಲಿಟರಿ ವಿಮಾನದಲ್ಲಿ ಗುರುವಾರ ಸಂಜೆ ಪಾರ್ಥಿವ ಶರೀರಗಳನ್ನು ದೆಹಲಿಗೆ ತರಲಾಗುತ್ತದೆ. ಶುಕ್ರವಾರ ಪಾರ್ಥಿವ ಶರೀರಗಳನ್ನು ರಾವತ್‌ ಅವರ ನಿವಾಸಕ್ಕೆ ತರಲಾಗುತ್ತದೆ. ಆ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೂ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಕಾಮರಾಜ್‌ ಮಾರ್ಗದಿಂದದೆಹಲಿ ಕಂಟೋನ್ಮೆಂಟ್‌ನ ಬರಾಡ್‌ ಸ್ಕೋರ್‌ವರೆಗೂ ಪಾರ್ಥಿವ ಶರೀರದ ಮೆರವಣಿಗೆ ಸಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT