ಬಲಿಯಾ, ಉತ್ತರಪ್ರದೇಶ: ಇಲ್ಲಿನ ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ಮಕ್ಕಳಿಂದ ಇಟ್ಟಿಗೆ ಹೊರಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಬಲಿಯಾ ಜಿಲ್ಲೆಯ ಬಿಸೌಲಿ ಸರ್ಕಾರಿ ಪ‍್ರಾಥಮಿಕ ಶಾಲೆಯ ಆವರಣ ಸ್ವಚ್ಛಗೊಳಿಸುವ ವೇಳೆ ಮಕ್ಕಳು ಇಟ್ಟಿಗೆ ಹೊರುತ್ತಿದ್ದ ವಿಡಿಯೊ ಆಗಸ್ಟ್ 12ರಂದು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗಿತ್ತು.
ವಿಡಿಯೊ ವೈರಲ್ ಆದ ವಿಷಯ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಅವರು ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ಮುಖ್ಯಶಿಕ್ಷಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಉತ್ತರಪ್ರದೇಶ ಸರ್ಕಾರಿ ನೌಕರರ ಶಿಸ್ತು ಮೇಲ್ಮನವಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ’ ಎಂದು ವರದಿ ನೀಡಿದ್ದಾರೆ.
‘ವರದಿ ಅನ್ವಯ, ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಶಿಕ್ಷಕ ಮಹೇಶ್ ಯಾದವ್ ಅವರನ್ನು ಅಮಾನತುಗೊಳಿಸಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಮನೀಶ್ ಕುಮಾರ್ ಸಿಂಗ್ ಅವರು ಸೋಮವಾರ ತಿಳಿಸಿದ್ದಾರೆ.