ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌: ಬಿಜೆಪಿಗೆ ಹಾರಿದ್ದ ಹೆಚ್ಚಿನ ಮಾಜಿ ಕಾಂಗ್ರೆಸ್‌ ನಾಯಕರಿಗೆಲ್ಲ ಜಯ

Last Updated 10 ಡಿಸೆಂಬರ್ 2022, 6:02 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಬಹುತೇಕ ಮಾಜಿ ಕಾಂಗ್ರೆಸ್‌ ನಾಯಕರು ಗೆಲುವಿನ ನಗೆ ಬೀರಿದ್ದಾರೆ.

ಗುಜರಾತ್‌ ಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್‌ ಪಟೇಲ್‌, ಮಾಜಿ ಕಾಂಗ್ರೆಸ್‌ ಶಾಸಕನ ಪುತ್ರ ಸೇರಿದಂತೆ ಒಟ್ಟು 14 ಮಂದಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಈ ಪೈಕಿ 11 ಮಂದಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಕೇವಲ ಮೂರು ಮಂದಿ ಪರಾಭವಗೊಂಡಿದ್ದಾರೆ.

ಬಿಜೆಪಿಯಿಂದ ಗೆದ್ದು ಬೀಗಿದ ಮಾಜಿ ಕಾಂಗ್ರೆಸ್‌ ನಾಯಕರಿವರು

1. ಹಾರ್ದಿಕ್‌ ಪಟೇಲ್‌
ಗುಜರಾತ್‌ ಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್‌ ಪಟೇಲ್‌ ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡರು. ವೀರಮಗಾಮ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸುಮಾರು 51 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ ಮತ್ತು ಎಎಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ.

2. ಕುನ್ವರ್‌ಜಿ ಬವಲಿಯಾ
ಕೊಲೀ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿರುವ ಕುನ್ವರ್‌ಜಿ ಬವಲಿಯಾ ಅವರು ಜಸದಣ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಜುಲೈ 2018ರಲ್ಲಿ ಕಾಂಗ್ರೆಸ್‍‌ ತೊರೆದು ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲೂ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶ ಕಂಡಿದ್ದರು. ಎಎಪಿ ಅಭ್ಯರ್ಥಿ ವಿರುದ್ಧ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಚುನಾಯಿತರಾಗಿದ್ದಾರೆ.

3. ರಾಘವ್‌ಜಿ ಪಟೇಲ್‌
ಜಾಮ್‌ ನಗರ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಘವ್‌ಜಿ ಪಟೇಲ್‌ ಗೆಲುವು ಸಾಧಿಸಿದ್ದಾರೆ.

4. ರಾಜೇಂದ್ರಸಿಂಹ ರಥವ
ಛೋಟ ಉದಯಪುರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಂಗ್ರಾಮ್‌ಸಿಂಹ ರಥವ ಅವರನ್ನು 29 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಜೇಂದ್ರಸಿಂಹ ರಥವ ಅವರು ಪರಾಭವಗೊಳಿಸಿದ್ದಾರೆ. ರಾಜೇದ್ರಸಿಂಹ ಅವರು ತಮ್ಮ ತಂದೆ ಮೋಹನ್‌ಸಿಂಹ ರಥವ ಜೊತೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

5. ಪ್ರದ್ಯುಮನ್‌ಸಿಂಹ ಜಡೇಜಾ
ಅಬಡಾಸಾ ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕ ಪ್ರದ್ಯುಮನ್‌ಸಿಂಹ ಜಡೇಜಾ ಅವರು ಕಳೆದ ವರ್ಷ ಬಿಜೆಪಿ ಸೇರ್ಪಡೆಗೊಂಡರು. ಉಪ ಚುನಾವಣೆಯಲ್ಲೂ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಇದೀಗ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 9 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

6. ಜೀತು ಚೌಧರಿ
ಕಪರಾಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಕಾಂಗ್ರೆಸ್‌ ಮುಖಂಡ ಜೀತು ಚೌಧರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ವಸಂತ್‌ ಪಟೇಲ್‌ ಅವರನ್ನು 32 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.

7. ಅಲ್ಪೇಶ್‌ ಠಾಕೂರ್‌
ಕಾಂಗ್ರೆಸ್‌ ಮುಖಂಡರಾಗಿದ್ದ ಅಲ್ಪೇಶ್‌ ಠಾಕೂರ್‌ 2019ರಲ್ಲಿ ರಾಧನ್‌ಪುರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಬಿಜೆಪಿ ಟಿಕೆಟ್‌ ಮೂಲಕ ಗಾಂಧಿನಗರ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ಸಮೀಪದ ಸ್ಪರ್ಧಿ ವಿರುದ್ಧ 33 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

8. ಅಕ್ಷಯ್‌ ಪಟೇಲ್‌
ಬಿಜೆಪಿಯಿಂದ ಸ್ಪರ್ಧಿಸಿದ್ದ ಅಕ್ಷಯ್‌ ಪಟೇಲ್‌ ಕರಜಣ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ ಬಳಿಕ 2020ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

9. ಸಿ.ಕೆ.ರವುಲ್‌ಜಿ
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಸಿ.ಕೆ.ರವುಲ್‌ಜಿ ಗೋಧ್ರಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ.

10. ಭಾಗ ಬರದ್‌
ಬಿಜೆಪಿ ಸೇರಿರುವ ಮಾಜಿ ಕಾಂಗ್ರೆಸ್‌ ಮುಖಂಡ ಭಾಗ ಬರದ್‌ ಅವರು ತಾಲಾಲಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದಾರೆ.

11. ಜೆ.ವಿ.ಕಕದಿಯಾ
ಧಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಜೆ.ವಿ.ಕಕದಿಯಾ ಯಶಸ್ವಿಯಾಗಿದ್ದಾರೆ. ಇವರು 2020ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಮರು ಆಯ್ಕೆಗೊಂಡಿದ್ದರು.

ಬಿಜೆಪಿ ಟಿಕೆಟ್‌ ಪಡೆದು ಸೋತ ಮಾಜಿ ಕಾಂಗ್ರೆಸಿಗರಿವರು
1. ಹರ್ಷದ್‌ ರಿಬದಿಯಾ, ವಿಸಾವದರ್‌ ಕ್ಷೇತ್ರ
2. ಅಶ್ವಿನ್‌ ಕೋಟವಾಲ್‌, ಖೆಡಬ್ರಹ್ಮ ಕ್ಷೇತ್ರ
3. ಮನಿಲಾಲ್‌ ವಘೇಲಾ, ವಡಗಾಮ್‌ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT