ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಾ ಮಸೀದಿ ಸಂರಕ್ಷಿತ ಸ್ಮಾರಕ ಘೋಷಣೆ: ಮನಮೋಹನ್ ಸಿಂಗ್ ಪತ್ರ ನಾಪತ್ತೆಗೆ HC ಕಿಡಿ

Published 28 ಆಗಸ್ಟ್ 2024, 13:56 IST
Last Updated 28 ಆಗಸ್ಟ್ 2024, 13:56 IST
ಅಕ್ಷರ ಗಾತ್ರ

ನವದೆಹಲಿ: ಐತಿಹಾಸಿಕ ಮುಘಲ್‌ ಎರಾ ಜಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಡಿ ಎಂದು ಆದೇಶಿಸಿದ್ದರು ಎನ್ನಲಾದ ಅಂದಿನ (2004) ಪ್ರಧಾನಿ ಮನಮೋಹನ ಸಿಂಗ್ ಅವರ ಆದೇಶ ಪ್ರತಿಯನ್ನು ಹಾಜರುಪಡಿಸುವಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಇಲಾಖೆ (ASI)ಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.

ಜಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡುವಂತೆ ಹಾಗೂ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಬುಧವಾರ ನಡೆಯಿತು.

‘ಮನಮೋಹನ ಸಿಂಗ್ ಅವರು ಬರೆದ ಪತ್ರ ಕಳೆದುಹೋಗಿದ್ದು, ಅದನ್ನು ಹುಡುಕಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ. ಒಂದೊಮ್ಮೆ ದಾಖಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ವಿಫಲರಾದಲ್ಲಿ, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.

‘ನಿಮ್ಮ ವಶದಲ್ಲಿರುವ ಪ್ರಮುಖ ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ಆದರೆ ಆ ದಾಖಲೆಯೇ ಕಳೆದುಹೋಗಿದೆ ಎನ್ನುವುದು ತೀರಾ ಗಂಭೀರ ವಿಷಯ’ ಎಂದು ನ್ಯಾ. ಪ್ರತಿಭಾ ಎಂ. ಸಿಂಗ್ ಹಾಗೂ ನ್ಯಾ. ಅಮಿತ್ ಶರ್ಮಾ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಜಮಾ ಮಸೀದಿಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಡಿ ಎಂಬ ಪ್ರಧಾನಿಯ ಆದೇಶ ಪ್ರತಿಯನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಂಸ್ಕೃತಿ ಸಚಿವಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು.

‘ಮುಂದಿನ ವಿಚಾರಣೆ ಸಂದರ್ಭದಲ್ಲಿ ಸಚಿವಾಲಯವೋ ಅಥವಾ ಪುರಾತತ್ವ ಇಲಾಖೆಯೋ ಇಬ್ಬರಲ್ಲಿ ಯಾರಾದರೂ ಮೂಲ ದಾಖಲೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು’ ಎಂದು ಪೀಠ ಎಚ್ಚರಿಸಿದೆ. ವಿಚಾರಣೆಯನ್ನು ಸೆ. 27ಕ್ಕೆ ಪೀಠ ಮುಂದೂಡಿತು.

ಹಿನ್ನೆಲೆ: ‘2004ರಲ್ಲಿ ಜಮಾ ಮಸೀದಿಯನ್ನು ಕೇಂದ್ರೀಕೃತ ಸಂರಕ್ಷಿತ ಸ್ಮಾರಕ ಎಂದು ಅಧಿಸೂಚನೆ ಹೊರಡಿಸುವ ಕುರಿತ ವಿಷಯ ಮುನ್ನಲೆಗೆ ಬಂದಿತ್ತು. ಆದಾಗ್ಯೂ, ಶಾಹಿ ಇಮಾಮ್ ಅವರಿಗೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಭರವಸೆ ನೀಡಿದ ಪ್ರಕಾರ ಮಸೀದಿಯನ್ನು ಕೇಂದ್ರೀಕೃತ ಸಂರಕ್ಷಿತ ಸ್ಮಾರಕ ಎಂದು ಘೋಷಿಸದಂತೆ 2004ರ ಅ. 20ರಂದು ಪತ್ರ ಬರೆದಿದ್ದರು’ ಎಂದು ಎಎಸ್‌ಐ ಅಧಿಕಾರಿಗಳು ಅಫಿಡವಿಟ್ ಮೂಲಕ ನ್ಯಾಯಾಲಯಕ್ಕೆ ಹೇಳಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT