ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಸರ್ಕಾರ ನಡೆಸಲು ಕೇಜ್ರಿವಾಲ್‌ಗೆ ವ್ಯವಸ್ಥೆ ಕಲ್ಪಿಸಲು ಕೋರಿಕೆ: PIL ವಜಾ

Published 8 ಮೇ 2024, 11:11 IST
Last Updated 8 ಮೇ 2024, 11:13 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜೈಲಿನಿಂದ ಸರ್ಕಾರ ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಕೋರಿಕೆ ಇದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ. ಅಲ್ಲದೆ, ಈ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರಿಗೆ ₹1 ಲಕ್ಷ ದಂಡ ವಿಧಿಸಿದೆ.

ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ ಅವರು ಕೇಜ್ರಿವಾಲ್ ರಾಜೀನಾಮೆಗೆ ಅನಗತ್ಯವಾಗಿ ಒತ್ತಾಯಿಸಬಾರದು ಎಂಬ ಸೂಚನೆ ನೀಡಬೇಕು ಎನ್ನುವ ಕೋರಿಕೆಯೂ ಈ ಅರ್ಜಿಯಲ್ಲಿತ್ತು. 

ಕೇಜ್ರಿವಾಲ್ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ, ನ್ಯಾಯಾಂಗ ಬಂಧನದಲ್ಲಿ ಇರುವಾಗ ಯಾವುದೇ ಸೌಲಭ್ಯ ಒದಗಿಸುವ ವಿಚಾರವಾಗಿ ಆದೇಶ ನೀಡುವ ಅಗತ್ಯ ಇಲ್ಲ ಎಂದು ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಹೇಳಿತು. 

ಮಾಧ್ಯಮಗಳಿಗೆ ಸೆನ್ಸಾರ್ ವಿಧಿಸಲು ಹಾಗೂ ರಾಜಕೀಯ ವಿರೋಧಿಗಳು ಹೇಳಿಕೆ ನೀಡುವುದನ್ನು ತಡೆಯಲು ಕೋರ್ಟ್‌ನಿಂದ ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಜೈಲಿನಿಂದ ಸರ್ಕಾರವನ್ನು ನಡೆಸುವುದು ಸಾಧ್ಯವಿಲ್ಲದ ಕೆಲಸವಾದರೂ, ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡರೆ ಅದು ಸಾಧ್ಯವಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದರು.

ಜೈಲಿನಲ್ಲಿ ಇರುವ ಕೇಜ್ರಿವಾಲ್ ಅವರಿಗೆ ವಿಡಿಯೊ ಕಾನ್ಫರೆನ್ಸ್ ಸೌಲಭ್ಯ ಒದಗಿಸಬೇಕು ಎಂದು ಅವರು ಕೋರಿದ್ದರು. ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಮಾಧ್ಯಮಗಳು ವೈಭವೀಕರಿಸುವ ಬಗೆಯಲ್ಲಿ ಹೆಡ್‌ಲೈನ್ ನೀಡದಂತೆ ಸೂಚಿಸಬೇಕು ಎಂದು ಕೂಡ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT