ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ: ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಪಿಐಎಲ್‌ ವಜಾ

ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ದಿನದಂದು ರಜೆ
Published 21 ಜನವರಿ 2024, 12:42 IST
Last Updated 21 ಜನವರಿ 2024, 12:42 IST
ಅಕ್ಷರ ಗಾತ್ರ

ಮುಂಬೈ: ಅಯೋಧ್ಯೆಯಲ್ಲಿ ನಡೆಯಲಿರುವ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಇದೇ 22ರಂದು ಮಹಾರಾಷ್ಟ್ರ ಸರ್ಕಾರ ರಜೆ ಘೋಷಿಸಿರುವುದನ್ನು ಪ್ರಶ್ನಿಸಿ ನಾಲ್ವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಬಾಂಬೆ ಹೈಕೋರ್ಟ್‌ ಭಾನುವಾರ ವಜಾಗೊಳಿಸಿದೆ.

ಕಾನೂನು ವಿದ್ಯಾರ್ಥಿಗಳಾದ ಶಿವಾಂಗಿ ಅಗರ್‌ವಾಲ್‌, ಸತ್ಯಜೀತ್‌ ಸಾಳ್ವೆ, ವೇದಾಂತ್‌ ಅಗರ್‌ವಾಲ್‌ ಮತ್ತು ಖುಷಿ ಬಂಗಿಯಾ ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗಿರೀಶ್‌ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರಿದ್ದ ನ್ಯಾಯಪೀಠವು, ‘ಇದು ರಾಜಕೀಯ ಪ್ರೇರಿತವಾಗಿ ಮತ್ತು ಕ್ಷುಲ್ಲಕ ಕಾರಣಕ್ಕಾಗಿ ಸಲ್ಲಿಸಿರುವ ಅರ್ಜಿ’ ಎಂದು ಅಭಿಪ್ರಾಯಪಟ್ಟಿದೆ. 

‘ಉತ್ತಮ ವಿಷಯಗಳಿಗಾಗಿ ಸಮಯ ವಿನಿಯೋಗಿಸಿ’ ಎಂದೂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ.

‘ಸಾಮಾನ್ಯವಾಗಿ ಇಂತಹ ಅರ್ಜಿಗಳನ್ನು ವಜಾಗೊಳಿಸುವಾಗ ಅರ್ಜಿದಾರರಿಗೆ ದಂಡ ವಿಧಿಸಲಾಗುತ್ತದೆ. ಆದರೆ ಅರ್ಜಿದಾರರು ವಿದ್ಯಾರ್ಥಿಗಳಾಗಿರುವುದರಿಂದ ಎಚ್ಚರಿಕೆಯನ್ನಷ್ಟೇ ನೀಡುತ್ತಿದ್ದೇವೆ’ ಎಂದಿದೆ.

‘ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಜೆ ಘೋಷಿಸುವ ಮೂಲಕ ರಾಜಕೀಯ ಉದ್ದೇಶಗಳಿಗಾಗಿ ಅಧಿಕಾರವನ್ನು ದುರುಪಯೋಗಪಡಿಸಲಾಗಿದೆ’ ಎಂದು ವಿದ್ಯಾರ್ಥಿಗಳು ಅರ್ಜಿಯಲ್ಲಿ ಆರೋಪಿಸಿದ್ದರು.

‘ಬೇರೆ ಕಾರಣಗಳಿಂದಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಮೂಲಕ ಕಾನೂನಿನ ದುರುಪಯೋಗವಾಗಿದೆ’ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಆ ವಿಚಾರ ಮಾಧ್ಯಮಗಳಿಗೆ ಹೇಗೆ ತಿಳಿಯಿತು ಎಂದೂ ಪ್ರಶ್ನಿಸಿದೆ.

‘ಹೆಚ್ಚಿನ ಸಾರ್ವತ್ರಿಕ ರಜೆಗಳನ್ನು ಧಾರ್ಮಿಕ ಕಾರ್ಯಕ್ರಮಗಳಿಗಾಗಿಯೇ ನೀಡಲಾಗುತ್ತದೆ. ಇಂತಹ ರಜೆಗಳನ್ನು ಕೇವಲ ಒಂದು ಸಮುದಾಯಕ್ಕೆ ಮಾತ್ರ ನೀಡಲಾಗುತ್ತಿಲ್ಲ. ಎಲ್ಲಾ ಸಮುದಾಯಗಳಿಗೂ ನೀಡಲಾಗುತ್ತದೆ’ ಎಂದು ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಬಿರೇಂದ್ರ ಸರಾಫ್‌ ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT