ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ನಾರಾಯಣ ರಾಣೆ ಬಂಗಲೆಯ ಅನಧಿಕೃತ ಭಾಗಗಳ ಧ್ವಂಸಕ್ಕೆ ಹೈಕೋರ್ಟ್‌ ಆದೇಶ

Last Updated 20 ಸೆಪ್ಟೆಂಬರ್ 2022, 10:08 IST
ಅಕ್ಷರ ಗಾತ್ರ

ಮುಂಬೈ: ಮುಂಬೈನ ಜುಹು ಎಂಬಲ್ಲಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಬಂಗಲೆಗೆ ಸಂಬಂಧಿಸಿದ ಅನಧಿಕೃತ ನಿರ್ಮಾಣಗಳನ್ನು ನೆಲಸಮಗೊಳಿಸುವಂತೆ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ಬಾಂಬೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಇದು ಮಹಡಿ ಜಾಗ ಸೂಚ್ಯಂಕ (ಎಫ್‌ಎಸ್‌ಐ) ಮತ್ತು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿಯಮಗಳನ್ನು ಉಲ್ಲಂಘಿಸಿದೆ ಎಂದು ಕೋರ್ಟ್‌ ಹೇಳಿದೆ.

ರಾಣೆ ಅವರ ಕುಟುಂಬ ನಡೆಸುತ್ತಿರುವ ಕಂಪನಿ ಅನಧಿಕೃತ ನಿರ್ಮಾಣವನ್ನು ಕ್ರಮಬದ್ಧಗೊಳಿಸುವಂತೆ ಕೋರಿ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ಪರಿಗಣಿಸಲು, ಅದಕ್ಕೆ ಅನುಮತಿ ನೀಡಲು ಬಿಎಂಸಿಗೆ ಸಾಧ್ಯವಿಲ್ಲ. ಏಕೆಂದರೆ ಅದು ಅನಧಿಕೃತ ನಿರ್ಮಾಣವನ್ನು ಪ್ರೋತ್ಸಾಹಿಸುತ್ತದೆ ಎಂದು ನ್ಯಾಯಮೂರ್ತಿ ಆರ್‌. ಡಿ ಧನುಕಾ ಮತ್ತು ಕಮಲ್‌ ಖಾತ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.

ಎರಡು ವಾರಗಳಲ್ಲಿ ಬಂಗಲೆಯ ಅನಧಿಕೃತ ಭಾಗಗಳನ್ನು ಕೆಡವಲು ಮತ್ತು ನಂತರದ ಒಂದು ವಾರದೊಳಗೆ ವರದಿಯನ್ನು ಸಲ್ಲಿಸಲು ಬಿಎಂಸಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಪೀಠವು ರಾಣೆಗೆ ₹10 ಲಕ್ಷ ದಂಡ ವಿಧಿಸಿತು. ಎರಡು ವಾರಗಳಲ್ಲಿ ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಣವನ್ನು ಠೇವಣಿ ಮಾಡುವಂತೆ ಸೂಚಿಸಿತು.

‘ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ಆರು ವಾರಗಳ ಕಾಲ ತನ್ನ ಆದೇಶಕ್ಕೆ ತಡೆ ನೀಡಬೇಕು’ ಎಂದು ರಾಣೆ ಪರ ವಕೀಲ ಶಾರ್ದೂಲ್ ಸಿಂಗ್ ಕೋರಿದರು. ಆದರೆ, ಪೀಠ ಮನವಿಯನ್ನು ತಿರಸ್ಕರಿಸಿತು.

ಈ ಹಿಂದೆ ಪಾಲಿಕೆ ಹೊರಡಿಸಿದ ಆದೇಶಗಳಿಂದ ಪ್ರಭಾವಿತವಾಗದೆ ತಮ್ಮ ಎರಡನೇ ಅರ್ಜಿಯನ್ನು ನಿರ್ಧರಿಸಲು ಬಿಎಂಸಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಣೆ ಅವರ ಕುಟುಂಬದ ಒಡೆತನದ ಕಂಪನಿ ‘ಕಾಲ್ಕಾ ರಿಯಲ್ ಎಸ್ಟೇಟ್ಸ್’ ಸಲ್ಲಿಸಿದ ಅರ್ಜಿಯನ್ನೂ ನ್ಯಾಯಾಲಯವು ವಜಾಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT