ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MBBS ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನೆಕ್ಸ್ಟ್‌ ಅಣಕು ಪರೀಕ್ಷೆಗೆ ಶುಲ್ಕ ವಿನಾಯಿತಿ

Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಜುಲೈ 28ರಂದು 2019ನೇ ಶೈಕ್ಷಣಿಕ ಸಾಲಿನ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ದೆಹಲಿಯ ಏಮ್ಸ್‌ ನಡೆಸುತ್ತಿರುವ ರಾಷ್ಟ್ರೀಯ ನಿರ್ಗಮನ ಅಣಕು ಪರೀಕ್ಷೆಗೆ(ನೆಕ್ಸ್ಟ್) ಯಾವುದೇ ಶುಲ್ಕ ವಿಧಿಸಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.  

ರಾಷ್ಟ್ರೀಯ ವೈದ್ಯಕೀಯ ಆಯೋಗದ(ಎನ್‌ಎಂಸಿ) ಕಾಯ್ದೆ ಅನ್ವಯ ನೆಕ್ಸ್ಟ್‌ ಪರೀಕ್ಷೆ ನಡೆಸಲಾಗುತ್ತದೆ. ಇದರ ಸಿದ್ಧತೆಗಾಗಿ ಅಣಕು ಪರೀಕ್ಷೆ ಬರೆಯುವ ಸಾಮಾನ್ಯ, ಒಬಿಸಿ ವರ್ಗದ ವಿದ್ಯಾರ್ಥಿಗಳಿಗೆ ₹2 ಸಾವಿರ, ಎಸ್‌.ಸಿ, ಎಸ್‌.ಟಿ, ಇಡಬ್ಲ್ಯುಎಸ್‌ ವಿದ್ಯಾರ್ಥಿಗಳಿಗೆ ₹1 ಸಾವಿರ ಶುಲ್ಕ ನಿಗದಿಪಡಿಸಿ ಏಮ್ಸ್‌ ಕಳೆದ ವಾರ ಆದೇಶ ಹೊರಡಿಸಲಾಗಿತ್ತು. ಅಂಗವಿಕಲರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು. ಪ್ರಸ್ತುತ ಎಲ್ಲಾ ವಿದ್ಯಾರ್ಥಿಗಳಿಗೂ ವಿನಾಯಿತಿ ಸೌಲಭ್ಯ ನೀಡಲು ಆಯೋಗಕ್ಕೆ ಸೂಚಿಸಿದೆ.

ಈ ಪರೀಕ್ಷೆಯು ಕಂಪ್ಯೂಟರ್‌ ಆಧಾರಿತವಾಗಿದ್ದು, ಬಹುಮಾದರಿ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪರೀಕ್ಷೆ ಹೇಗಿರಲಿದೆ?: ನೆಕ್ಸ್ಟ್‌ ಪರೀಕ್ಷೆಯು ವಾರ್ಷಿಕವಾಗಿ ಎರಡು ಹಂತದಲ್ಲಿ ನಡೆಯಲಿದೆ. ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಮತ್ತು ವೈದ್ಯಕೀಯ ವೃತ್ತಿ ಆರಂಭಿಸಲು ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ಎನ್‌ಎಂಸಿ ಸ್ಪಷ್ಟಪಡಿಸಿದೆ.

ಮೊದಲ ಹಂತದ ಪರೀಕ್ಷೆಯಲ್ಲಿ (ನೆಕ್ಸ್ಟ್‌1) ಉತ್ತೀರ್ಣರಾದವರು ಆಯಾ ವೈದ್ಯಕೀಯ ಕಾಲೇಜಿಗೆ ಒಳಪಟ್ಟ ಆಸ್ಪತ್ರೆಯಲ್ಲಿ ಒಂದು ವರ್ಷ ಕಾಲ ಸಹಾಯಕ ವೈದ್ಯರಾಗಿ (ಇಂಟರ್ನಿಶಿಪ್) ಸೇವೆ ಸಲ್ಲಿಸಬೇಕಿದೆ. ಜೊತೆಗೆ, ಈ ಹಂತದಲ್ಲಿ ಉತ್ತೀರ್ಣರಾದವರನ್ನು ಮೆರಿಟ್‌ ಆಧಾರದ ಮೇಲೆ ಸ್ನಾತಕೋತ್ತರ ಪ್ರವೇಶಾತಿಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ. 

ಇಂಟರ್ನಿಶಿಪ್ ಬಳಿಕ ವಿದ್ಯಾರ್ಥಿಗಳು ಎರಡನೇ ಹಂತದ (ನೆಕ್ಸ್ಟ್‌ 2) ಪರೀಕ್ಷೆಯಲ್ಲಿ ಉತ್ತೀರ್ಣರಾದರಷ್ಟೇ ದೇಶದಲ್ಲಿ ವೃತ್ತಿ ಆರಂಭಿಸಲು ಅರ್ಹರಾಗುತ್ತಾರೆ ಎಂದು ಹೇಳಿದೆ.

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡಿ ಭಾರತದಲ್ಲಿ ವೃತ್ತಿ ಆರಂಭಿಸಲು ಇಚ್ಛೆಯುಳ್ಳ ವಿದ್ಯಾರ್ಥಿಗಳು ಈ ಎರಡೂ ಹಂತದ ಅರ್ಹತೆ ಪಡೆಯಬೇಕಿದೆ ಎಂದು ಸ್ಪಷ್ಟಪಡಿಸಿದೆ.

2020ರಲ್ಲಿಯೇ ಎನ್‌ಎಂಸಿ ಕಾಯ್ದೆ ಜಾರಿಗೊಂಡಿದೆ. ಇದರ ಅನ್ವಯ ಮೂರು ವರ್ಷದೊಳಗೆ ನೆಕ್ಸ್ಟ್‌ ಪರೀಕ್ಷೆ ನಡೆಸಬೇಕಿದೆ. ಆದರೆ, ಕಳೆದ ವರ್ಷ ಕೇಂದ್ರ ಸರ್ಕಾರವು 2024ರ ಸೆಪ್ಟೆಂಬರ್‌ಗೆ ಪರೀಕ್ಷೆಯನ್ನು ಮುಂದೂಡಿತ್ತು. ಪ್ರಸ್ತುತ ಇದಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅಣಕು ಪರೀಕ್ಷೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT