ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮ ಮಂದಿರ ನಿರ್ಮಾಣ: ಮೋದಿಯನ್ನು ಹೊಗಳಿದ ಕಾಂಗ್ರೆಸ್ ನಾಯಕಿ ಪ್ರತಿಭಾ ಸಿಂಗ್

Published 13 ಜನವರಿ 2024, 6:51 IST
Last Updated 13 ಜನವರಿ 2024, 6:51 IST
ಅಕ್ಷರ ಗಾತ್ರ

ಶಿಮ್ಲಾ: 'ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಕ್ರಮಗಳು ನಿಜವಾಗಿಯೂ ಶ್ಲಾಘನೀಯ' ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿಭಾ ಅವರು ಮಾತನಾಡಿರುವ ವಿಡಿಯೊ ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಶೇ 98ರಷ್ಟು ಹಿಂದೂಗಳು ಇದ್ದಾರೆ. ಎಲ್ಲರೂ ಶ್ರೀರಾಮನಲ್ಲಿ ನಂಬಿಕೆ ಹೊಂದಿದ್ದೇವೆ. ನಮ್ಮ ಧರ್ಮ ಪ್ರಗತಿ ಸಾಧಿಸುವುದನ್ನು ನೋಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಇದೇ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಹಾಗೂ ತಮ್ಮ ಮಗ ವಿಕ್ರಮಾದಿತ್ಯ ಸಿಂಗ್‌ಗೆ ಜಂಟಿ ಆಹ್ವಾನ ಬಂದಿದೆ. ಆದರೆ, ತೆರಳುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆದ ತಮ್ಮ ದಿವಂಗತ ಪತಿ ವೀರಭದ್ರ ಸಿಂಗ್‌ ಅವರೂ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದರು. ಸಾಕಷ್ಟು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸಿದ್ದರು ಎಂದೂ ಹೇಳಿದ್ದಾರೆ.

ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರಾಜಕೀಯಗೊಳಿಸಲಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌, ತಮಗೆ ನೀಡಲಾಗಿದ್ದ ಆಹ್ವಾನವನ್ನು ಎರಡು ದಿನಗಳ ಹಿಂದಷ್ಟೇ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ, ಪ್ರತಿಭಾ ಸಿಂಗ್‌ ಅವರು ಮೋದಿಯನ್ನು ಹೊಗಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ.

ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತು ಜನವರಿ 8ರಂದು ಮಾತನಾಡಿದ್ದ ವಿಕ್ರಮಾದಿತ್ಯ ಸಿಂಗ್‌, ಇದರಲ್ಲಿ ರಾಜಕೀಯ ಸಮಸ್ಯೆ ಏನಿಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ. ಅಯೋಧ್ಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದರು.

ಒಂದು ದಿನದ ಬಳಿಕ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಅಯೋಧ್ಯೆಗೆ ತೆರಳಲು ಯಾರ ಆಹ್ವಾನವೂ ಬೇಕಿಲ್ಲ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಂತರ ರಾಮ ಮಂದಿರಕ್ಕೆ ತೆರಳುತ್ತೇನೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT