ಸಿಲ್ಛಾರ್ (ಅಸ್ಸಾಂ): ನೆರೆಯ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದರ ಹೊರತಾಗಿಯೂ, ಹಿಂದೂ ಸಮುದಾಯದವರು ಅಲ್ಲಿಂದ ಭಾರತಕ್ಕೆ ಬರುವ ಪ್ರಯತ್ನ ಮಾಡಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, 'ಹಿಂದೂಗಳು ಬಾಂಗ್ಲಾದೇಶದಲ್ಲೇ ಉಳಿದಿದ್ದಾರೆ ಮತ್ತು ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಒಬ್ಬನೇ ಒಬ್ಬ ಹಿಂದೂ ವ್ಯಕ್ತಿ ಭಾರತದೊಳಗೆ ಬರಲು ಪ್ರಯತ್ನಿಸಿರುವುದು ಪತ್ತೆಯಾಗಿಲ್ಲ' ಎಂದಿದ್ದಾರೆ.
ಬಾಂಗ್ಲಾದ ಮುಸ್ಲಿಮರು ಉದ್ಯೋಗಕ್ಕಾಗಿ ದೇಶದೊಳಗೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
'ಕಳೆದೊಂದು ತಿಂಗಳಲ್ಲಿ 35 ಮಂದಿ ಮುಸ್ಲಿಂ ನುಸುಳುಕೋರರನ್ನು ಬಂಧಿಸಿದ್ದೇವೆ. ಅವರು ಪ್ರಯತ್ನಿಸಿರುವುದು ಅಸ್ಸಾಂಗೆ ಬರುವುದಕ್ಕಲ್ಲ. ಜವಳಿ ಉದ್ಯಮದಲ್ಲಿ ಕೆಲಸ ಹುಡುಕಿ ಕರ್ನಾಟಕ, ತಮಿಳುನಾಡಿಗೆ ಹೋಗಲು ಯತ್ನಿಸುತ್ತಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ.
'ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಅಲ್ಲಿನ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇವೆ' ಎಂದೂ ಹೇಳಿದ್ದಾರೆ.