ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bilkis Bano case: ಅಪರಾಧಿಗಳ ಪೋಷಕ ಬಿಜೆಪಿ; ಇಂಡಿಯಾ ಬಣದ ನಾಯಕರ ಕಿಡಿ

Published 8 ಜನವರಿ 2024, 13:31 IST
Last Updated 8 ಜನವರಿ 2024, 13:31 IST
ಅಕ್ಷರ ಗಾತ್ರ

ನವದೆಹಲಿ: 2002ರ ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಿ ಗುಜರಾತ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಇದನ್ನು ವಿರೋಧ ಪಕ್ಷಗಳ ಇಂಡಿಯಾ ಬಣ ಸ್ವಾಗತಿಸಿದೆ.

‘ಅಪರಾಧಿಗಳ ಪೋಷಿಸುವವರು ಯಾರು’ ಎಂಬುದನ್ನು ದೇಶ ಈಗ ನೋಡುತ್ತಿದೆ. ಕೇಸರಿ ಪಕ್ಷದ ಮಹಿಳಾ ವಿರೋಧಿ ನೀತಿ ಈಗ ಬಯಲಾಗಿದೆ ಎಂದು ಅದು ಟೀಕಿಸಿದೆ.

ಬಿಲ್ಕಿಸ್ ಬಾನು ಅವರಿಗೆ ಈಗ ನ್ಯಾಯ ದೊರೆತಿದೆ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ಮತ್ತು ಅವರಿಗೆ ಹಾರ ಹಾಕಿ ಸ್ವಾಗತಿಸಿದ್ದವರಿಗೆ ಇದು ಕಪಾಳಮೋಕ್ಷವಾಗಿದೆ ಎಂದು ಇಂಡಿಯಾ ಬಣ ಹೇಳಿದೆ.

ಚುನಾವಣಾ ಲಾಭಕ್ಕಾಗಿ ನ್ಯಾಯವನ್ನು ಕೊಲ್ಲುವ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಇವತ್ತಿನ ಸುಪ್ರೀಂಕೋರ್ಟ್‌ನ ತೀರ್ಪು, ಅಪರಾಧಿಗಳ ಪೋಷಕರು ಯಾರು ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಈ ತೀರ್ಪು ಬಿಲ್ಕಿಸ್ ಬಾನು ಅವರ ದಣಿವರಿಯದ ಹೋರಾಟ, ದುರಂಹಕಾರಿ ಬಿಜೆಪಿ ಸರ್ಕಾರದ ವಿರುದ್ಧದ ನ್ಯಾಯದ ಜಯದ ಸಂಕೇತವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಂತಿಮವಾಗಿ ನ್ಯಾಯ ಮೇಲುಗೈ ಸಾಧಿಸಿದೆ. ಬಿಜೆಪಿಯ ಮಹಿಳಾ ವಿರೋಧಿ ನೀತಿಗಳ ಮೇಲಿನ ಮುಸುಕು ಸರಿದಿದೆ. ಈ ಆದೇಶವು ನ್ಯಾಯಾಂಗ ವ್ಯವಸ್ಥೆ ಮೇಲೆ ಜನರ ವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.

ಅಂತಿಮವಾಗಿ, ಕಾನೂನಿನ ಬಾಹುಗಳು ತಪ್ಪಿತಸ್ಥರನ್ನು ಸೆರೆ ಹಿಡಿದಿವೆ. ಇದೊಂದು ನ್ಯಾಯದ ಸ್ಮರಣೀಯ ವಿಜಯವಾಗಿದೆ ಎಂದು ತೃಣಮೂಲ ಕಾ'ಗ್ರೆಸ್ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.

ಕ್ರಿಮಿನಲ್ ಅಪರಾಧಿಗಳ ಬಿಡುಗಡೆಗೆ ಅವಕಾಶ ಕೊಟ್ಟ ಮತ್ತು ಅವರ ಬಿಡುಗಡೆಯನ್ನು ಸಂಭ್ರಮಿಸಿದ ಬಿಜೆಪಿ ನಾಯಕರು, ಮತ್ತೆ ಕಾನೂನು ಮತ್ತು ಸುವ್ಯವಸ್ಥೆ, ಮಹಿಳಾ ಭದ್ರತೆ ಅಥವಾ ಅಲ್ಪ ಸಂಖ್ಯಾತರ ಹಕ್ಕುಗಳ ಬಗ್ಗೆ ಮಾತನಾಡಲಾರರು ಎಂದು ಹೇಳಿದ್ದಾರೆ.

‘ಎರಡು ದಶಕಗಳ ಬಳಿಕ ಬಿಲ್ಕಿಸ್‌ ಬಾನು ಅವರಿಗೆ ನ್ಯಾಯ ದೊರಕಿದೆ. ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳ ಕ್ರೌರ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅಭಿಪ್ರಾಯ ಪಟ್ಟಿದ್ದಾರೆ.

‘ಇಂತಹ ಸನ್ನಿವೇಶಗಳು ನ್ಯಾಯ ಪಡೆಯುವುದು ಸಾಧ್ಯವಿದೆ ಎಂಬುದನ್ನು ಮತ್ತೆ ಸಾಬೀತುಪಡಿಸುತ್ತವೆ. ದುರಾದೃಷ್ಟವಶಾತ್, ಇಂತಹ ಸಂದರ್ಭಗಳು ವಿರಳವಾಗಿವೆ’ ಎಂದು ಆರ್‌ಜೆಡಿ ಸಂಸದ ಮನೋಜ್ ಜೆ ಝಾ ಹೇಳಿದ್ದಾರೆ.

ಇಡೀ ಬಿಜೆಪಿ ನಾಯಯಕತ್ವ ಬಿಲ್ಕಿಸ್ ಬಾನು ಅವರ ಬಳಿ ಕ್ಷಮೆ ಕೇಳಬೇಕು. ಆಕೆ ಮೋದಿ ನೇತೃತ್ವದ ಕೇಂದ್ರ ಮತ್ತು ಗುಜರಾತ್‌ನ ಬಿಜೆಪಿ ಸರ್ಕಾರಗಳಿಂದ ನಿರಂತರ ಅಪಮಾನ ಅನುಭವಿಸಿದ್ದಾರೆ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ಮತ್ತು ಹಾರ ತುರಾಯಿ ಹಾಕಿ ಮೆರವಣಿಗೆ ಮಾಡಿದವರಿಗೆ ಕಪಾಳ ಮೋಕ್ಷವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ. ‘ಗುಜರಾತ್‌ ಸರ್ಕಾರವು ಅತ್ಯಾಚಾರಿಗಳ ಜತೆ ಸೇರಿ ಸತ್ಯವನ್ನು ನಿಗ್ರಹಿಸಿದೆ ಮತ್ತು ನ್ಯಾಯಾಲಯವನ್ನು ತಪ್ಪುದಾರಿಗೆಳೆದಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಅತ್ಯಾಚಾರಿಗಳು ಮತ್ತು ಕೊಲೆಗಾರರ ಜತೆ ಬಿಜೆಪಿ ನಿಂತಿದೆ. ಭಾರತದ ಮಹಿಳೆಯರ ಸುರಕ್ಷತೆಗೆ ಈ ಪಕ್ಷವನ್ನು ನಂಬಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಗುಜರಾತ್‌ನ ಬಿಜೆಪಿ ಸರ್ಕಾರ ಅತ್ಯಾಚಾರಿಗಳಿಗೆ ಸಹಾಯ ಮಾಡುತ್ತಿದ್ದರೆ, ಬಿಲ್ಕಿಸ್ ಬಾನು ತನ್ನ ನ್ಯಾಯಕ್ಕಾಗಿ ಏಕಾಂಗಿಯಾಗಿ ಹೋರಾಡಿದರು. ನೀವು ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದಿದ್ದರೂ ಅತ್ಯಾಚಾರಿಗಳಿಗೆ ಯಾವುದೇ ವಿನಾಯಿತಿ ಸಿಗುವುದಿಲ್ಲ ಎಂಬ ಪ್ರಬಲ ಸಂದೇಶ ಈ ತೀರ್ಪಿನಿಂದ ರವಾನೆಯಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

‘ಅತ್ಯಾಚಾರಿಗಳಿಗೆ ನೆರವು ನೀಡಿದ ಸರ್ಕಾರ’ 

ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವು ಅತ್ಯಾಚಾರಿಗಳಿಗೆ ನೆರವು ನೀಡಿದೆ. ಯಾವುದೇ ರಾಜಕೀಯ ವಿಚಾರಧಾರೆ ಹೊಂದಿದ್ದರೂ  ಕ್ಷಮಿಸುವುದು ಸಾಧ್ಯವಿಲ್ಲ ಎಂಬ ಸಂದೇಶ ಅತ್ಯಾಚಾರಿಗಳಿಗೆ ತಲುಪಬೇಕು – ಅಸಾದುದ್ದೀನ್‌ ಓವೈಸಿ ಎಐಎಂಐಎಂ ಮುಖ್ಯಸ್ಥ  * ಈ ತೀರ್ಪು ತಪ್ಪನ್ನು ಸರಿ ಪಡಿಸಿದೆ. ಪ್ರಕರಣದ ಸ್ಥಿತಿಗತಿ ಮತ್ತು ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದು ಗಮನಿಸಿದರೆ  ಬಿಜೆಪಿ ದೇಶದಲ್ಲಿ ಅಧಿಕಾರದಲ್ಲಿ ಉಳಿದರೆ ಯಾವ ಪರಿಸ್ಥಿತಿ ಇರಲಿದೆ ಎಂಬುದನ್ನು ಸೂಚಿಸುತ್ತದೆ.
– ಪಿ.ಕೆ. ಕುಂಞಾಲಿ ಕುಟ್ಟಿ  ಐಯುಎಂಎಲ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT