ನವದೆಹಲಿ : ‘ಕೇವಲ ದೇಶೀಯ ಅಗತ್ಯತೆಗಳ ಪೂರೈಕೆಗೆ ಮಾತ್ರವಲ್ಲದೇ ಜಾಗತಿಕ ಬೇಡಿಕೆಗನುಗುಣವಾಗಿ ವಿಶ್ವಾಸಾರ್ಹ ಉತ್ಪಾದನೆಗೆ ಕೊಡುಗೆ ನೀಡುವ ಉದ್ದೇಶವನ್ನು ಭಾರತದ ಸೆಮಿಕಂಡಕ್ಟರ್ ಮಿಷನ್ ಹೊಂದಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ನಿರ್ಧಾರಗಳು ಮತ್ತು ಸಂಬಂಧಗಳು ತಕ್ಷಣದ ವ್ಯವಹಾರವನ್ನು ಮೀರಿದ ಪರಿಣಾಮಗಳನ್ನು ಹೊಂದಿವೆ. ಜಾಗತಿಕ ಆರ್ಥಿಕತೆಯ ಮರು-ನಿಯಂತ್ರಣಕ್ಕೆ ಈ ಮಿಷನ್ ಕೊಡುಗೆ ನೀಡಬಹುದು’ ಎಂದು ಪ್ರಮುಖ ಜಾಗತಿಕ ಸೆಮಿಕಂಡಕ್ಟರ್ ಸಂಸ್ಥೆಗಳ ಉನ್ನತ ಅಧಿಕಾರಿಗಳಿಗೆ ತಿಳಿಸಿದರು.
‘ಸೆಮಿಕಂಡಕ್ಟರ್ ಪೂರೈಕೆ ಸಹಕಾರ ಕುರಿತಾದ ಭಾರತ-ಜಪಾನ್ ಒಪ್ಪಂದ ಈ ತಿಂಗಳು ಅಂತಿಮಗೊಂಡಿದೆ. ಇದೇ ರೀತಿಯ ಒಪ್ಪಂದವನ್ನು ಮಾರ್ಚ್ ತಿಂಗಳಿನಲ್ಲಿ ಅಮೆರಿಕದೊಂದಿಗೆ ಮಾಡಿಕೊಳ್ಳಲಾಗಿದೆ. ನಂಬಿಕೆ ಹಾಗೂ ಪಾರದರ್ಶಕತೆ ಡಿಜಿಟಲ್ ಕಾರ್ಯಕ್ಷೇತ್ರ ಮತ್ತು ಭವಿಷ್ಯದ ಪ್ರಮುಖ ಅಂಶಗಳಾಗಿ ಹೊರಹೊಮ್ಮಿವೆ’ ಎಂದು ಅವರು ಪ್ರತಿಪಾದಿಸಿದರು.
‘ದೇಶದ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುವುದಕ್ಕೋಸ್ಕರ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದಕರನ್ನು ಆಕರ್ಷಿಸಲು ಭಾರತ ಪ್ರಯತ್ನಿಸುತ್ತಿದೆ’ ಎಂದೂ ಅವರು ಹೇಳಿದರು.