ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈತಾಪುರ ಅಣು ವಿದ್ಯುತ್ ಸ್ಥಾವರಕ್ಕೆ ಗ್ರಹಣ

Last Updated 30 ಸೆಪ್ಟೆಂಬರ್ 2018, 16:30 IST
ಅಕ್ಷರ ಗಾತ್ರ

ನವದೆಹಲಿ: ಜಗತ್ತಿನ ಅತ್ಯಂತ ದೊಡ್ಡ ಅಣು ವಿದ್ಯುತ್ ಸ್ಥಾವರವನ್ನುಭಾರತದಲ್ಲಿ ನಿರ್ಮಿಸುವ ಸಲುವಾಗಿ ಭಾರತ ಮತ್ತು ಫ್ರಾನ್ಸ್‌ ಒಪ್ಪಂದಕ್ಕೆ ಸಹಿ ಮಾಡಿ ಸೆಪ್ಟೆಂಬರ್ 30ಕ್ಕೆ 10 ವರ್ಷ ಕಳೆದಿದೆ. ಆದರೆ ಸ್ಥಾವರದ ನಿರ್ಮಾಣ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.

ಆದರೆ ಅಣು ವಿದ್ಯುತ್ ಸ್ಥಾವರದಲ್ಲಿ ಬಳಸುವ ತಂತ್ರಜ್ಞಾನಗಳನ್ನು ಬೇರೆ ಕ್ಷೇತ್ರಗಳಲ್ಲಿ ಬಳಸುವ ಬಗ್ಗೆ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ.

‘ಅಣುಶಕ್ತಿಯ ಶಾಂತಿಯುತ ಬಳಕೆ’ ಒಪ್ಪಂದಕ್ಕೆಭಾರತ ಮತ್ತು ಫ್ರಾನ್ಸ್‌ 2008ರ ಸೆಪ್ಟೆಂಬರ್ 30ರಂದು ಸಹಿ ಹಾಕಿದ್ದವು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೊಂಕಣ ತೀರದಲ್ಲಿರುವ ಜೈತಾಪುರದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣ, ರಿಯಾಕ್ಟರ್‌ಗಳ ನಿರ್ಮಾಣ, ಯುರೇನಿಯಂ ಪೂರೈಕೆ ಮತ್ತು ಭಾರತೀಯ ಅಣು ವಿದ್ಯುತ್ ಕಾರ್ಪೊರೇಷನ್ ಲಿಮಿಟೆಡ್‌ನ (ಎನ್‌ಪಿಸಿಐಎಲ್) ನೌಕರರಿಗೆ ತರಬೇತಿ ನೀಡಲು ಫ್ರಾನ್ಸ್‌ನ ‘ಅರೆವಾ’ ಕಂಪನಿ ಒಪ್ಪಿಕೊಂಡಿತ್ತು.

‘ಅರೆವಾ ಕಂಪನಿ ಜತೆಗೆ ಎಲ್ಲಾ ಸ್ವರೂಪದ ಮಾತುಕತೆಗಳೂ ನಡೆದು ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು. ಆದರೆ ಆ ಕಂಪನಿ ಆರ್ಥಿಕ ನಷ್ಟಕ್ಕೆ ತುತ್ತಾಯಿತು. ಅರೆವಾವನ್ನು ಇಡಿಎಫ್ ಎಂಬ ಇನ್ನೊಂದು ಕಂಪನಿ ಖರೀದಿಸಿದೆ. ಸ್ಥಾವರದ ನಿರ್ಮಾಣ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ವಿದ್ಯುತ್ ದರದ ಬಗ್ಗೆ ಹೊಸದಾಗಿ ಇಡಿಎಫ್ ಜತೆ ಮಾತುಕತೆ ನಡೆಸಲಾಗುತ್ತಿದೆ. ಹೀಗಾಗಿ ಯೋಜನೆ ಅನುಷ್ಠಾನ ವಿಳಂಬವಾಗಲಿದೆ’ ಎಂದು ಮೂಲಗಳು ಹೇಳಿವೆ.

ಸ್ಥಾವರ ನಿರ್ಮಾಣಕ್ಕೆ 2,300 ಎಕರೆಯಷ್ಟು ಭೂಮಿ ಅಗತ್ಯವಿದ್ದು, ಅದರಲ್ಲಿ ಶೇ 80ರಷ್ಟು ಭೂಸ್ವಾಧೀನ ಈಗಾಗಲೇ ಆಗಿದೆ. ಅಲ್ಲದೆ ಸ್ಥಾವರ ನಿರ್ಮಾಣಕ್ಕೆ ಪರಿಸರ ಅನುಮತಿಯೂ ದೊರೆತಿದೆ. ಆದರೆ ನಿಯೋಜಿತ ಸ್ಥಳದಲ್ಲಿ ಕಚೇರಿ, ಕ್ಯಾಂಟೀನ್ ಮತ್ತಿತರ ಸಣ್ಣಪುಟ್ಟ ಕಟ್ಟಡಗಳ ನಿರ್ಮಾಣವಷ್ಟೇ ಪೂರ್ಣಗೊಂಡಿವೆ. ರಿಯಾಕ್ಟರ್‌ ಮತ್ತು ಸಂಬಂಧಿತ ಕಟ್ಟಡಗಳ ವಿನ್ಯಾಸವೇ ಇನ್ನೂ ಪೂರ್ಣಗೊಂಡಿಲ್ಲ ಎಂದು ಮೂಲಗಳು ಹೇಳಿವೆ.

ಜಗತ್ತಿನ ಅತ್ಯಂತ ದೊಡ್ಡ ಮತ್ತು ಹೆಚ್ಚು ಸಾಮರ್ಥ್ಯದ ಸ್ಥಾವರ ನಿರ್ಮಾಣದ ಗುರಿ

* ಭಾರತ–ಫ್ರಾನ್ಸ್‌ ಸಹಯೋಗದಲ್ಲಿ ನಿರ್ಮಾಣ

* ಒಪ್ಪಂದಕ್ಕೆ ಸಹಿ ಹಾಕಿ ಕಳೆದುಹೋದ 10 ವರ್ಷಗಳು

* ಇನ್ನೂ ಆರಂಭವಾಗದ ರಿಯಾಕ್ಟರ್‌ಗಳ ನಿರ್ಮಾಣ

ಬೋರ್ಡ್‌ ಬಿಟ್ಟರೇ ಬೇರೇನಿಲ್ಲ

ಸ್ಥಾವರಕ್ಕೆಂದು ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಒಂದು ಬೋರ್ಡ್‌ ನೆಡಲಾಗಿದ್ದು, ಬೇರೆ ಕಾಮಗಾರಿಗಳು ಆರಂಭವಾಗಿಲ್ಲ.

ಸೊರಗಿದ ರೈತ ಹೋರಾಟ

ಸ್ಥಾವರ ನಿರ್ಮಾಣವನ್ನು ವಿರೋಧಿಸಿ ರತ್ನಗಿರಿಯ ರೈತರು, ಮೀನುಗಾರರು ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಹೋರಾಟ ದುರ್ಬಲವಾಗಿದೆ. ಬಹುತೇಕ ರೈತರು ಸರ್ಕಾರಕ್ಕೆ ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ.

ಸರಾಗವಾಗೇ ನಡೆದಿತ್ತು...

ದೇಶದ ಬೇರೆಡೆ ಅಣುವಿದ್ಯುತ್ ಸ್ಥಾವರಕ್ಕೆ ಭಾರಿ ವಿರೋಧವಿತ್ತು. ಆದರೆ ಈ ಸ್ಥಾವರದ ಭೂಸ್ವಾಧೀನ, ಪರಿಸರ ಅನುಮತಿ ಎಲ್ಲವೂ ಸುಲಲಿತವಾಗಿ ಮುಗಿದಿದೆ. ಆದರೂ ಯೋಜನೆ ನನೆಗುದಿಗೆ ಬಿದ್ದಿದೆ ಎನ್ನುತ್ತವೆ ಎನ್‌ಪಿಸಿಐಎಲ್‌ ಮೂಲಗಳು.

ಆರಂಭದ ಸೂಚನೆಯೇ ಇಲ್ಲ

‘ಪ್ರಾತ್ಯಕ್ಷಿಕಾ ರಿಯಾಕ್ಟರ್‌ ಅನ್ನು ಸ್ಥಾಪಿಸುವಂತೆ ಇಡಿಎಫ್‌ಗೆ ಸೂಚಿಸಲಾಗಿದೆ. 2020ರ ವೇಳೆಗೆ ಅದು ಸಿದ್ಧವಾಗುವ ಸಾಧ್ಯತೆ ಇದೆ. ನಂತರವೇ ಕಂಪನಿ ಜತೆಗೆ ಒಡಂಬಡಿಕೆ ಅಂತಿಮವಾಗಲಿದೆ. ಬಳಿಕವಷ್ಟೇ ನಿರ್ಮಾಣ ಕಾಮಗಾರಿ ಆರಂಭ ವಾಗಲಿದೆ’ ಎಂದು ಮೂಲಗಳು ಹೇಳಿವೆ.

ಅಂಕಿ–ಅಂಶ

9,900 ಮೆಗಾವಾಟ್ - ಸ್ಥಾವರದ ಒಟ್ಟು ಸಾಮರ್ಥ್ಯ

1,650 ಮೆಗಾವಾಟ್ - ಸಾಮರ್ಥ್ಯದ ಆರು ರಿಯಾಕ್ಟರ್‌ಗಳು ಸ್ಥಾವರದಲ್ಲಿರಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT