ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಉದ್ಯೋಗಿಯೊಬ್ಬರು ಕಚೇರಿಯ ವಾಶ್‌ರೂಮ್‌ನಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶುಕ್ರವಾರ ಈ ಘಟನೆ ನಡೆದಿದೆ. ಮೃತ ಉದ್ಯೋಗಿಯನ್ನು ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಹಿರಿಯ ವಿಶ್ಲೇಷಕ ನಿತಿನ್ ಎಡ್ವಿನ್ ಮೈಕೆಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 7 ಗಂಟೆಯ ಹೊತ್ತಿಗೆ ನಿತಿನ್ ಕಚೇರಿಯ ವಾಶ್‌ರೂಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹೋದ್ಯೋಗಿಗಳು ಅವರನ್ನು ತಕ್ಷಣವೇ ಹತ್ತಿರದಲ್ಲಿದ್ದ ಏಮ್ಸ್‌ಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹೃದಯ ಸ್ತಂಭನದಿಂದಾಗಿ ಮೃತಪಟ್ಟಿರುವುದಾಗಿ ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ನಿತಿನ್ ಅವರು, ಪತ್ನಿ ಹಾಗೂ ಆರು ವರ್ಷದ ಮಗನನ್ನು ಅಗಲಿದ್ದಾರೆ.