ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದು ಮೋದಿ ಮಾಧ್ಯಮ ಸಮೀಕ್ಷೆ: ರಾಹುಲ್ ಗಾಂಧಿ

ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆ * ‘ಇಂಡಿಯಾ’ ಕೂಟ ಬಹುಮತ ಗಳಿಸಲಿದೆ ಎಂದು ಭರವಸೆ
Published 2 ಜೂನ್ 2024, 16:39 IST
Last Updated 2 ಜೂನ್ 2024, 16:39 IST
ಅಕ್ಷರ ಗಾತ್ರ

ನವದೆಹಲಿ: ಮತಗಟ್ಟೆ ಸಮೀಕ್ಷೆಗಳನ್ನು ‘ಬೋಗಸ್’ ಎಂದು ಕರೆದಿರುವ ಕಾಂಗ್ರೆಸ್, ಇದು ಚುನಾವಣಾ ಅಕ್ರಮವನ್ನು ಸಮರ್ಥಿಸಿಕೊಳ್ಳುವ ‘ಉದ್ದೇಶಪೂರ್ವಕ ಪ್ರಯತ್ನ’ ಮತ್ತು ‘ಇಂಡಿಯಾ’ ಕೂಟದ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿರುವ ‘ಒತ್ತಡ ತಂತ್ರ’ದ ಭಾಗ ಎಂದು ಭಾನುವಾರ ಟೀಕಿಸಿದೆ.

ಪಕ್ಷದ ಸಂಸದರ ಜತೆ ವಿಡಿಯೊ ಸಂವಾದ ನಡೆಸಿದ ನಂತರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇದನ್ನು ಮತಗಟ್ಟೆ ಸಮೀಕ್ಷೆ ಎನ್ನಲಾಗುವುದಿಲ್ಲ. ಇದು ಮೋದಿ ಮಾಧ್ಯಮ ಸಮೀಕ್ಷೆ. ಇದು ಮೋದಿ ಅವರ ಚುನಾವಣೆ. ಇದು ಅವರ ಕಲ್ಪನೆಯ ಚುನಾವಣೆ’ ಎಂದು ಹೇಳಿದರು.

ಕಾಂಗ್ರೆಸ್ ಎಷ್ಟು ಸ್ಥಾನ ಗಳಿಸಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀವು ಸಿಧು ಮೂಸೆ ವಾಲಾ ಅವರ ‘295’ ಎಂಬ ಹಾಡು ಕೇಳಿರುವಿರಾ? ಅದಕ್ಕೇ 295 ಸ್ಥಾನ ಸಿಗಲಿದೆ’ ಎಂದರು.

ಹೊಸ ಸರ್ಕಾರದ ಮೊದಲ ನೂರು ದಿನಗಳ ಕಾರ್ಯಯೋಜನೆ ಸಿದ್ಧಪಡಿಸಲು ಹಲವು ಸಭೆ ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಪ್ರಯತ್ನವನ್ನು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ನಾನು ವಾಪಸ್ ಬರುತ್ತಿದ್ದೇನೆ, ನಾನು ಮತ್ತೆ ಪ್ರಧಾನಿ ಆಗುತ್ತೇನೆ ಎಂದು ಹೇಳುವುದು ಒತ್ತಡದ ತಂತ್ರ. ಅವರು ಈ ಮೂಲಕ ಅಧಿಕಾರಶಾಹಿಗೆ, ಆಡಳಿತಾಂಗಕ್ಕೆ ಸಂದೇಶ ಕಳುಹಿಸುತ್ತಿದ್ದು, ನ್ಯಾಯಸಮ್ಮತ ಮತ ಎಣಿಕೆ ನಡೆಸಬೇಕಾದ ಜವಾಬ್ದಾರಿ ಹೊಂದಿರುವ ನಾಗರಿಕ ಸೇವಾ ಅಧಿಕಾರಿಗಳನ್ನು ಇಂಥ ಒತ್ತಡ ತಂತ್ರಗಳ ಮೂಲಕ ಬೆದರಿಸಲಾಗದು ಎಂಬುದಾಗಿ ನಂಬಿದ್ದೇನೆ’ ಎಂದು ತಿಳಿಸಿದರು.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ‘ಮತಗಟ್ಟೆ ಸಮೀಕ್ಷೆಗಳು ‘ಸಂಪೂರ್ಣ ಬೋಗಸ್’ ಆಗಿವೆ. ಜೂನ್ 4ರಂದು ನಿರ್ಗಮಿಸುವುದು ಅನಿವಾರ್ಯವಾಗಿರುವ ಮತ್ತು ಗ್ಯಾರಂಟಿಯಾಗಿರುವ ವ್ಯಕ್ತಿಯೊಬ್ಬರೇ ಇದರ ಸೃಷ್ಟಿಕರ್ತರು’ ಎಂದು ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೇ ಟೀಕಿಸಿದರು. 

‘ಮತಗಟ್ಟೆ ಸಮೀಕ್ಷೆಗಳು ಚುನಾವಣಾ ಅಕ್ರಮವನ್ನು, ಇವಿಎಂಗಳ ಕೈವಾಡವನ್ನು ಸಮರ್ಥಿಸುವ ಉದ್ದೇಶಪೂರ್ವಕ ಪ್ರಯತ್ನ. ನಾವು ಹೆದರಿಕೊಳ್ಳುವುದಿಲ್ಲ. ಮತಗಟ್ಟೆ ಸಮೀಕ್ಷೆಗಳಿಗಿಂತ ಸಂಪೂರ್ಣ ಭಿನ್ನವಾದ, ನಿಜವಾದ ಫಲಿತಾಂಶವನ್ನು ನೀವು ಜೂನ್ 4ರಂದು ನೋಡಲಿದ್ದೀರಿ’ ಎಂದು ತಿಳಿಸಿದರು. 

ಪ್ರತಿಕ್ರಿಯೆಗಳು

ಎನ್‌ಡಿಎ ಮೈತ್ರಿಕೂಟವು ಮತಗಟ್ಟೆ ಸಮೀಕ್ಷೆಗಳಲ್ಲಿ ಹೇಳಿರುವುದಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 48 ಸ್ಥಾನಗಳ ಪೈಕಿ ‘ಮಹಾಯುತಿ’ 35–40 ಸ್ಥಾನ ಗೆಲ್ಲಲಿದ್ದು, ದೇಶದಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ  

-ರಾಮದಾಸ್ ಅಠವಳೆ, ಕೇಂದ್ರ ಸಚಿವ 

ಮತಗಟ್ಟೆ ಸಮೀಕ್ಷೆಗಳ ಕಾಲಾನುಕ್ರಮಣಿಕೆಯನ್ನು ಗಮನಿಸಿ. ಬಿಜೆಪಿ ಪರ ಮಾಧ್ಯಮಗಳು ಪಕ್ಷವು 300 ಸ್ಥಾನ ದಾಟುತ್ತದೆ ಎಂದು ಬಿಂಬಿಸುತ್ತವೆ, ಅದು ವಂಚನೆಗೆ ಅವಕಾಶ ಕಲ್ಪಿಸುತ್ತದೆ ಎಂದು ವಿರೋಧ ಪಕ್ಷಗಳು ಮೊದಲೇ ಹೇಳಿದ್ದವು. ಇಂದಿನ ಚುನಾವಣೋತ್ತರ ಸಮೀಕ್ಷೆಗಳನ್ನು ಕೆಲವು ತಿಂಗಳ ಹಿಂದೆಯೇ ಸಿದ್ಧಪಡಿಸಲಾಗಿದೆ. ಸಾರ್ವಜನಿಕ ಅಭಿಪ್ರಾಯವನ್ನು ಮತಗಟ್ಟೆ ಸಮೀಕ್ಷೆಗಳ ಮೂಲಕ ಮೋಸಗೊಳಿಸಲಾಗಿದೆ. ಮತಗಟ್ಟೆ ಸಮೀಕ್ಷೆಗಳನ್ನು ಆಧರಿಸಿ ಬಿಜೆಪಿ ಸೋಮವಾರದಿಂದ ಆರಂಭವಾಗುವ ಷೇರು ಮಾರುಕಟ್ಟೆಯಿಂದ ಲಾಭ ಪಡೆಯಲು ಹೊರಟಿದೆ

-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

ಮತಗಟ್ಟೆ ಸಮೀಕ್ಷೆಗಳು ಎರಡು ತಿಂಗಳ ಹಿಂದೆ ‘ಮನೆಯಲ್ಲಿ ಸೃಷ್ಟಿಯಾದವು’. ಹೀಗಾಗಿ ಅವು ವಾಸ್ತವ ಸ್ಥಿತಿಯೊಂದಿಗೆ ತಾಳೆಯಾಗುವುದಿಲ್ಲ. ಅವುಗಳಿಗೆ ಯಾವ ಬೆಲೆಯೂ ಇಲ್ಲ. 2016, 2019 ಮತ್ತು 2021ರಲ್ಲಿ ಮತಗಟ್ಟೆ ಸಮೀಕ್ಷೆಗಳು ಹೇಗೆ ಸುಳ್ಳಾದವು ಎನ್ನುವುದನ್ನು ನಾವು ಕಂಡಿದ್ದೇವೆ. ಅಖಿಲೇಶ್, ತೇಜಸ್ವಿ, ಸ್ಟಾಲಿನ್ ಮತ್ತು ಉದ್ಧವ್ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಪ್ರಾದೇಶಿಕ ಪಕ್ಷಗಳು ಉತ್ತಮ ಫಲಿತಾಂಶ ತರಲಿವೆ

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

ಸಂಸದರು ಶಾಸಕರ ಜತೆ ವಿಡಿಯೊ ಸಂವಾದ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಪಕ್ಷದ ಸಂಸದರು ಶಾಸಕರು ರಾಜ್ಯ ಘಟಕಗಳ ಅಧ್ಯಕ್ಷರ ಜತೆ ವಿಡಿಯೊ ಸಂವಾದ ನಡೆಸಿ ಮತ ಎಣಿಕೆಯ ದಿನ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಸಂವಾದದಲ್ಲಿ ಪಕ್ಷದ ಹಿರಿಯ ಮುಖಂಡರಾದ ಜೈರಾಮ್ ರಮೇಶ್ ಕೆ.ಸಿ.ವೇಣುಗೋಪಾಲ್ ಮತ್ತು ಇತರರು ಪಾಲ್ಗೊಂಡು ಮತ ಎಣಿಕೆಯ ದಿನದ ಸಿದ್ಧತೆಗಳ ಬಗ್ಗೆ ‍ಪರಾಮರ್ಶೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದ್ದು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ ಎಂದು ಮತಗಟ್ಟೆ ಸಮೀಕ್ಷಗಳಲ್ಲಿ ಹೇಳಲಾಗಿದೆ. ಮತಗಟ್ಟೆ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ ಎಣಿಕೆಯ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT