ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸ್ಥಾನದ ಟಿಕೆಟ್‌ಗಾಗಿ ಸ್ಪರ್ಧೆಗಳಿದು ಸಂಸದನಾದ ಷರೀಫ್

Last Updated 25 ನವೆಂಬರ್ 2018, 10:49 IST
ಅಕ್ಷರ ಗಾತ್ರ

ಬೆಂಗಳೂರು:ಕಾಂಗ್ರೆಸ್ ಪಕ್ಷ ಇಬ್ಭಾಗವಾಗಿತ್ತು. ಇಂದಿರಾಗಾಂಧಿ ಒಂದು ಬಣಕ್ಕೆ ಮುಂದಾಳು. ಇನ್ನೊಂದು ಬಣಕ್ಕೆ ನಿಜಲಿಂಗಪ್ಪನವರ ನೇತೃತ್ವೃ. ಕರ್ನಾಟಕ ರಾಜಕಾರಣದಲ್ಲಿ ಹೊಸಬಗೆಯ ರಾಜಕೀಯ ಚಿತ್ರ ಅನಾವರಣಗೊಂಡಿತ್ತು. ದೇವರಾಜ ಅರಸು ಎಂ.ವಿ. ಕೃಷ್ಣಪ್ಪ, ಎಚ. ಸಿದ್ದವೀರಪ್ಪ ಮೊದಲಾದವರು ಇಂದಿರಾಗಾಂಧಿ ಬಣದಲ್ಲಿದ್ದರು.
ಆಗ ಲೋಕಸಭಾ ಚುನಾವಣೆ ಘೋಷಣೆಯಾಯಿತು. ರಾಜ್ಯದ ಎಳ್ಲಾ 28 ಕ್ಷೇತ್ರಗಳಲ್ಲೂ ಗೆದ್ದು ಬಿಡಬೇಕೆಂಬ ಹುರುಪು ಅರಸರಿಗೆ. ಬಾಂಗ್ಲಾ ಯುದ್ಧ ವಿಜಯ, ಬ್ಯಾಂಕ್ ರಾಷ್ಟ್ರೀಕರಣ ಮುಂತಾದವುಗಳಿಂದ ಇಂದಿರಾಜಿಅವರಿಗೆ ಜೋರಾದ ಜನಮನ್ನಣೆ ವ್ಯಕ್ತವಾಗುತ್ತಿದ್ದ ಕಾಲ ಅದು.

ಆವರೆಗೂ ರಾಜ್ಯ ರಾಜಕಾರಣದಲ್ಲಿ ಎರಡು ಸಮುದಾಯಗಳು ಪ್ರಮುಖ ಪಾತ್ರವಹಿಸುತ್ತಿದ್ದವು. ದೇವರಾದ ಅರಸರು ಭಿನ್ನ ಬಗೆಯ ರಾಜಕಾರಣ ಆರಂಭಿಸಲು ಇಂತಹ ಸನ್ನಿವೇಶವನ್ನು ಆಯ್ದುಕೊಂಡು, ಇಂದಿರಾ ಕಾಂಗ್ರೆಸ್‌ನ ರಾಜ್ಯದ ವ್ಯವಹಾರಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲೂ ಅರಸರದೇ ಅಂತಿಮ ನಿರ್ಧಾರವಾಗಿತ್ತು. ಇದಕ್ಕೆ ಇಂದಿರಾಗಾಂಧಿ ಅವರ ಶ್ರೀರಕ್ಷೆಯೂ ಇತ್ತು.
ಎಲ್ಲಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮವಾದರೂ ರಾಜಧಾನಿಯ ಪಕ್ಕದಲ್ಲೇ ಇದ್ದ ಕನಕಪುರ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಂಡಿರಲಿಲ್ಲ.
ಕನಕಪುರದ ಹಿರಿಯ ಮುಖಂಡ ಕರಿಯಪ್ಪನವರು ಸೇರಿದಂತೆ ಹಲವರು ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಅದಕ್ಕೆ ಮುಖ್ಯಕಾರಣ ಅಲ್ಲಿ ನಿಜಲಿಂಗಪ್ಪನವರ ಅಳಿಯ ಎಂ.ವಿ. ರಾಜಶೇಖರನ್ ನಿಜಲಿಂಗಪ್ಪ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದರು.

ಸಾಮಾನ್ಯ ಕಾರ್ಯಕರ್ತರಾಗಿದ್ದ ಚಿತ್ರದುರ್ಗದ ಸಿ.ಕೆ. ಜಾಫರ್ ಷರೀಫ್‌ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲೇ ಇದ್ದುಕೊಂಡು ಪಕ್ಷದ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಈ ಕಾಲದಲ್ಲಿ ಅವರಿಗೆ ಅರಸು ಬಣದ ಕೆಲವು ನಾಯಕರೊಂದಿಗೆ ಒಡನಾಟವಿತ್ತು. ರಾಮನಗರ ಅಥವಾ ಚೆನ್ನಪಟ್ಟಣದಿಂದ ವಿಧಾನಸಭೆಗೆ ಕಾಂಗ್ರೆಸ್ ಟಿಕೆಟ್ ಪಡೆಯುವ ಉದ್ದೇಶವಿತ್ತು. ಇದೇ ಕಾರಣಕ್ಕಾಗಿ ಅವರು ಕನಕಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ನಾಮಪತ್ರ ಸಲ್ಲಿಸಿದ್ದರು. ಈಗಿನಂತೆ ನಾಮಪತ್ರದ ಜೊತೆ ಬಿ ಫಾರ್ಮ್ ಕಡ್ಡಾಯವಾಗಿರಲಿಲ್ಲ. ನಾಮ ಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನ ಅಧಿಕೃತ ಅಭ್ಯರ್ಥಿ ಬಿ. ಫಾರ್ಮ್ ಸಲ್ಲಿಸಿದ್ದರೆ ಸಾಕಿತ್ತು.

ಕನಕಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಾಗಿ ತಡಕಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಜಾಫರ್ ಷರೀಫ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಗೊತ್ತಾಯಿತು. ಅವರಿಗೆ ಇದೊಂದು ರೀತಿಯಲ್ಲಿ ನೆಮ್ಮದಿಯನ್ನೂ ತಂದಿತು. ಷರೀಫ್ ಬಳಿ ಸಂಪನ್ಮೂಲವಿಲ್ಲ.ನಿಜಲಿಂಗಪ್ಪನವರ ಅಳಿಯನ ವಿರುದ್ಧ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬಂದಾಗ ಇಂದಿರಾ ಕಾಂಗ್ರೆಸ್ ಪಾಳೆಯದಲ್ಲಿ ಕೊಂಚ ಗಲಿಬಿಲಿ ಉಂಟಾಯಿತು. ಇಂದಿರಾ ಅವರ ವಿರುದ್ಧ ನಿಂತಿರುವ ನಿಜಲಿಂಗಪ್ಪನವರ ಅಳಿಯನ ವಿರುದ್ಧ ಇಂದಿರಾ ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇಲ್ಲ ಎಂಬ ಸಂದೇಶ ಹೋಗುವುದನ್ನು ತಪ್ಪಿಸುವುದರ ಹೊಣೆಯಲ್ಲಿ ಹಿರಿಯ ನಾಯಕ ಎಂ.ವಿ. ಕೃಷ್ಣಪ್ಪನವರಿಗೆ ವಹಿಸಲಾಯಿತು.

ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನ ಬಂತು. ಜಾಫರ್ ಷರೀಫ್ ನಾಮಪತ್ರ ಹಿಂತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಎಂ.ವಿ. ಕೃಷ್ಣಪ್ಪ ಅವರ ಗೆಳೆಯರು ಅದನ್ನು ತಪ್ಪಿಸಲು ಹರಸಾಹಸ ಮಾಡತೊಡಗಿದರು. ಹೇಗೋ ಮಾಡಿ ನಾಮಪತ್ರ ವಾಪಾಸ್ ತೆಗೆಯುವ ವೇಳೆ ಮುಗಿಯುವ ತನಕವೂ ಜಾಫರ್ ಷರೀಫ್ ಚುನಾವಣಾಧಿಕಾರಿಗಳ ಕಚೇರಿಗೆ ಹೋಗದಂತೆ ತಡೆದರು.

ಆ ಚುನಾವಣೆಯಲ್ಲಿ ಕರ್ನಾಟಕವಷ್ಟೇ ಅಲ್ಲದೆ ಇಡೀ ಭಾರತ ಇಂದಿರಾಗಾಂಧಿಯವರನ್ನು ಬೆಂಬಲಿಸಿತು. ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಗಳಿಸಿತು. ನಾಮಪತ್ರ ವಾಪಾಸ್ ಪಡೆಯಲು ವಿಫಲರಾದ ಜಾಫರ್ ಷರೀಫ್ ಆ ಕಾರಣದಿಂದಲೇ ಸಂಸದರಾದರು. ಆಮೇಲಿನದ್ದು ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT