ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ಪುನಃ ಸ್ಥಾಪಿಸಲು ಬದ್ಧ: ರಾಹುಲ್ ಗಾಂಧಿ

Published 22 ಆಗಸ್ಟ್ 2024, 10:24 IST
Last Updated 22 ಆಗಸ್ಟ್ 2024, 10:24 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆದಷ್ಟು ಶೀಘ್ರದಲ್ಲೇ ಪುನಃ ಸ್ಥಾಪಿಸುವ ದೃಢವಾದ ಬದ್ಧತೆಯನ್ನು ಕಾಂಗ್ರೆಸ್‌ ಹಾಗೂ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಹೊಂದಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಕಣಿವೆಗೆ ಭೇಟಿ ನೀಡಿರುವ ರಾಹುಲ್‌, ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಮ್ಮ ಪ್ರಾಶಸ್ತ್ಯವೇನು ಎಂಬುದು ಸ್ಪಷ್ಟವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ರಾಜ್ಯ ಸ್ಥಾನಮಾನ ಪುನಃ ಸ್ಥಾಪನೆಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ, 'ಚುನಾವಣೆ ಘೋಷಣೆಯಾಗಿರುವುದು ಉತ್ತಮ ನಡೆಯಾಗಿದೆ' ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನ ಬದಲಾವಣೆಯಂತಹ ಪ್ರಸಂಗ ಹಿಂದೆಂದೂ ಆಗಿರಲಿಲ್ಲ ಎಂದ ರಾಹುಲ್‌, 'ಸ್ವಾತಂತ್ರ್ಯಾನಂತರ ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವಾಗಿ ಕೆಳದರ್ಜೆಗೆ ಇಳಿಸಿದ್ದು ಇದೇ ಮೊದಲು' ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪುನಃ ಸ್ಥಾಪಿಸುವುದಕ್ಕೆ ತಮ್ಮ ಪಕ್ಷ ಆದ್ಯತೆ ನೀಡಿರುವುದು ಪ್ರಣಾಳಿಕೆಯಲ್ಲಿ ಕಾಣುತ್ತದೆ ಎಂದು ಪ್ರತಿಪಾದಿಸಿದ್ದಾರೆ. 'ಇಲ್ಲಿನ ಜನರಿಗೆ ನನ್ನ ಸಂದೇಶ ಸ್ಪಷ್ಟವಾಗಿದೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ನೆರವಾಗಲು ನಾವು ಸಿದ್ಧರಿದ್ದೇವೆ' ಎಂದು ಭರವಸೆ ನೀಡಿದ್ದಾರೆ.

'ದ್ವೇಷದ ಮಾರುಕಟ್ಟೆಯಲ್ಲಿ ಸಹೋದರತ್ವ ಮತ್ತು ಘನತೆಯೊಂದಿಗೆ ಪ್ರೀತಿಯ ಮಳಿಗೆಗಳನ್ನು ತೆರೆಯಬೇಕಿದೆ' ಎಂದು ಪುನರುಚ್ಛರಿಸಿದ್ದಾರೆ.

ಇಲ್ಲಿನ ವಿಧಾನಸಭೆಗೆ ಸೆಪ್ಟೆಂಬರ್‌ 18, ಸೆಪ್ಟೆಂಬರ್‌ 25 ಮತ್ತು ಅಕ್ಟೋಬರ್‌ 1ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಸೆಪ್ಟೆಂಬರ್‌ 30ರೊಳಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT