ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಸ್ಪರ್ಧಿಸದಿರಲು ಜಯಂತ್‌ ಸಿನ್ಹಾ, ಗೌತಮ್‌ ಗಂಭೀರ್‌ ನಿರ್ಧಾರ

Published 2 ಮಾರ್ಚ್ 2024, 13:26 IST
Last Updated 2 ಮಾರ್ಚ್ 2024, 13:26 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ಇಬ್ಬರು ಪ್ರಮುಖ ಸಂಸದರಾದ ಜಯಂತ್‌ ಸಿನ್ಹಾ ಮತ್ತು ಗೌತಮ್‌ ಗಂಭೀರ್‌ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ.

ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.‍ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದು, ಅಭ್ಯರ್ಥಿಗಳ ಪಟ್ಟಿಯಿಂದ ತಮ್ಮ ಹೆಸರು ಕೈಬಿಡುವಂತೆ ಮನವಿ ಮಾಡಿರುವುದಾಗಿ ಈ ಇಬ್ಬರು ನಾಯಕರು ತಿಳಿಸಿದ್ದಾರೆ.

ಜಾರ್ಖಂಡ್‌ನ ಹಜಾರಿಬಾಗ್‌ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಜಯಂತ್‌ ಸಿನ್ಹಾ, ‘ನೇರ ಚುನಾವಣಾ ಕರ್ತವ್ಯದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಪಕ್ಷದ ಆರ್ಥಿಕ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಕೆಲಸ ಮುಂದುವರಿಸುವೆ’ ಎಂದು ಶನಿವಾರ ಸಾಮಾಜಿಕ ಮಾಧ್ಯಮ ‘ಎಕ್ಸ್‌’ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವರೂ ಆದ ಜಯಂತ್‌ ಸಿನ್ಹಾ ‘ಭಾರತವು ಸೇರಿ ವಿಶ್ವದಾದ್ಯಂತ ಜಾಗತಿಕ ಹವಾಮಾನ ಬದಲಾವಣೆ ಎದುರಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳ ಮೇಲೆ ಗಮನ ಕೇಂದ್ರೀಕರಿಸಲು ಬಯಸಿದ್ದೇನೆ’ ಎಂದೂ ಹೇಳಿದ್ದಾರೆ.

ಇದಕ್ಕೂ ಮೊದಲು, ಪೂರ್ವ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ‘ಕ್ರಿಕೆಟ್‌ ಸಂಬಂಧಿತ ಕೆಲಸಗಳ ಮೇಲೆ ಗಮನಕೇಂದ್ರೀಕರಿಸುವ ಸಲುವಾಗಿ ಪಕ್ಷದ ರಾಜಕೀಯ ಕರ್ತವ್ಯಗಳಿಂದ ತನ್ನನ್ನು ಮುಕ್ತಗೊಳಿಸುವಂತೆ ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು.

ಗಂಭೀರ ತಮ್ಮ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಗುರುವಾರ ಭೇಟಿ ಮಾಡಿದ್ದರು. ಅಲ್ಲದೆ, ತಮ್ಮ ಈ ದಿಢೀರ್‌ ನಡೆಗೂ ಕೆಲ ತಾಸು ಮೊದಲು, ಬಿಜೆಪಿಗೆ ತಾವು ನೀಡಿದ ದೇಣಿಗೆಯ ರಸೀದಿಯ ಚಿತ್ರವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡು, ‘ವಿಕಸಿತ ಭಾರತ್’ ನಿರ್ಮಾಣ ಪ್ರಧಾನಿ ಮೋದಿಯವರ ದೂರದೃಷ್ಟಿಯ ಕೊಡುಗೆಯಾಗಿದೆ. ಎಲ್ಲರೂ ಈ ಅಭಿಯಾನದಲ್ಲಿ ಕೈಜೋಡಿಸಿ ಎಂದು ಮನವಿ ಮಾಡಿದ್ದರು.

‘ಕಳೆದ ಹತ್ತು ವರ್ಷಗಳಿಂದ ಹಜಾರಿಬಾಗ್‌ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸುವ ಸುಯೋಗ ಹೊಂದಿದ್ದೇನೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನಾಯಕತ್ವದಿಂದ ನನಗೆ ಆಶೀರ್ವಾದ ಮತ್ತು ಅವಕಾಶಗಳು ಸಿಕ್ಕಿವೆ. ಇವರೆಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಗಳು. ಜೈ ಹಿಂದ್’ ಎಂದು ಗಂಭೀರ್‌ ‘ಎಕ್ಸ್‌’ ಪೋಸ್ಟ್‌ನಲ್ಲಿ ಹೇಳಿದ್ದಾರೆ. 

ಹಲವು ಹೊಸ ನಾಯಕರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿರುವ ಬಿಜೆಪಿ, ಕೆಲವು ಹಾಲಿ ಸಂಸದರಿಗೆ ಪಕ್ಷದ ಸಂಘಟನೆಯ ಇತರ ಕೆಲಸಗಳತ್ತ ಗಮನ ಹರಿಸಲು ಸೂಚಿಸಿದೆ ಎನ್ನಲಾಗಿದೆ.

ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT