ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು: ಪುಕ್ಕಟೆ ನೆಲೆಸಿದವರಿಂದ ಸಮಸ್ಯೆ– ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌

Published 21 ಏಪ್ರಿಲ್ 2024, 14:19 IST
Last Updated 21 ಏಪ್ರಿಲ್ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ‘ಕೆಲವರು ಪುಕ್ಕಟೆಯಾಗಿ ಕ್ಯಾಂಪಸ್‌ನಲ್ಲಿ ಉಳಿದುಕೊಳ್ಳುತ್ತಿರುವುದು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಸಮಸ್ಯೆಗಳಲ್ಲಿ ಒಂದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌ ಹೇಳಿದ್ದಾರೆ. 

ದೀರ್ಘಕಾಲದವರೆಗೆ ಉಳಿಯುವ ವಿದ್ಯಾರ್ಥಿಗಳು ಮತ್ತು ಅಕ್ರಮವಾಗಿ ನೆಲೆಸುವ ಅತಿಥಿಗಳ ವಿರುದ್ಧ ಈಗ ವಿಶ್ವವಿದ್ಯಾಲಯದ ಆಡಳಿತವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ರೀತಿ ತಿಳಿಸಿದರು.

ತೆರಿಗೆದಾರರ ಹಣದಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ಕೆಲವರು ಪುಕ್ಕಟೆ ನೆಲೆಸಿದ್ದಾರೆಯೇ ಎಂಬ ಪ್ರಶ್ನೆಗೆ, ‘ಕ್ಯಾಂಪಸ್‌ನಲ್ಲಿ ಆ ಸಮಸ್ಯೆ ಇರುವುದು ನಿಜ. ಐದು ವರ್ಷಗಳಿಗೂ ಮೇಲ್ಪಟ್ಟು ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಯಾವ ವಿದ್ಯಾರ್ಥಿಗೂ ಅವಕಾಶ ನೀಡಬಾರದು ಎಂದು ಹಾಸ್ಟೆಲ್‌ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದು ಅವರು ಉತ್ತರಿಸಿದರು. 

ಜೆಎನ್‌ಯುವಿನ ಮಾಜಿ ವಿದ್ಯಾರ್ಥಿಯೂ ಆಗಿರುವ ಅವರು, ‘ನಾವು ವಿದ್ಯಾರ್ಥಿಯಾಗಿದ್ದಾಗಲೂ ಈ ಸಮಸ್ಯೆ ಇತ್ತು. ಆದರೆ ಈಗ ಹೆಚ್ಚಾಗಿದೆ. ನಮ್ಮ ಸಮಯದಲ್ಲಿ ಪ್ರಾಧ್ಯಾಪಕರು ನಿಷ್ಠುರವಾಗಿರುತ್ತಿದ್ದರು. ನಾಲ್ಕೂವರೆ ವರ್ಷದೊಳಗೆ ಸಂಶೋಧನೆ ಪೂರೈಸದಿದ್ದರೆ ವಿಶ್ವವಿದ್ಯಾಲಯದಿಂದ ಹೊರಹಾಕುವುದಾಗಿ ನನ್ನ ಮಾರ್ಗದರ್ಶಿ ಎಚ್ಚರಿಕೆ ನೀಡಿದ್ದರು. ಕಾಲಕ್ರಮೇಣ ಪ್ರಾಧ್ಯಾ‍ಪಕರು ಮೃದು ಧೋರಣೆ ಅನುಸರಿಸಲಾರಂಭಿಸಿದರು. ವಿದ್ಯಾರ್ಥಿಗಳ ಅಧ್ಯಯನದ ಕಾಲಾವಧಿ ವಿಸ್ತರಿಸಲಾರಂಭಿಸಿದರು’ ಎಂದರು. 

‘ಜೆಎನ್‌ಯು ವಿದ್ಯಾರ್ಥಿಗಳಲ್ಲದವರೂ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿರುತ್ತಾರೆ. ಅವರಲ್ಲಿ ಬಹುತೇಕರು ಯುಪಿಎಸ್‌ಸಿ ಅಥವಾ ಇನ್ನಿತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುತ್ತಾರೆ. ಅವರಿಗೆ ಜೆಎನ್‌ಯು ದಕ್ಷಿಣ ದೆಹಲಿಯಲ್ಲಿ ಅಗ್ಗವಾಗಿ ದೊರೆಯುವ ಸ್ಥಳವಾಗಿದೆ’ ಎಂದು ಹೇಳಿದರು.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಂದಿನ ನಾಯಕ ಕನ್ಹಯ್ಯಾ ಕುಮಾರ್‌ ಅವರನ್ನು 2016ರಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿಸಿದ್ದ ಪ್ರಕರಣ ನಡೆದಾಗಲೇ, ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಪುಕ್ಕಟೆ ನೆಲೆಸಿದ್ದಾರೆ ಎಂಬ ಕೂಗು ಕೇಳಿಬಂದಿತ್ತು. ತೆರಿಗೆದಾರರ ಹಣದಲ್ಲಿ ಜೆಎನ್‌ಯುಗೆ ಹಣಕಾಸಿನ ನೆರವು ನೀಡದಂತೆಯೂ ಕೂಗೆದ್ದಿತ್ತು.

ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ. ಹೊರಗಿನವರಿಂದ ಕಿರಿಕಿರಿಯಾದರೆ ಮಾಹಿತಿ ನೀಡುವಂತೆಯೂ ಹೇಳಲಾಗಿದೆ
ಶಾಂತಿಶ್ರೀ ಡಿ. ಪಂಡಿತ್‌ ಜೆಎನ್‌ಯು ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT