ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ ನಾಲಾ ತಿರುವು ಯೋಜನೆ: ಸ್ಥಳ ಪರಿಶೀಲನೆಗೆ ತಜ್ಞರ ಸಮಿತಿ ರಚನೆ

Published 25 ಡಿಸೆಂಬರ್ 2023, 15:33 IST
Last Updated 25 ಡಿಸೆಂಬರ್ 2023, 15:33 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ಯೋಜನೆಯು ಕಾರ್ಯಗತಗೊಳ್ಳಲಿರುವ ಕರ್ನಾಟಕದ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತಜ್ಞರ ಸಮಿತಿಯನ್ನು ರಚಿಸಿದೆ.

ಕೇಂದ್ರ ಅರಣ್ಯ ಸಚಿವಾಲಯದಡಿ ಕಾರ್ಯನಿರ್ವಹಿಸಲಿರುವ ಪ್ರಾಧಿಕಾರವು, ಉಲ್ಲೇಖಿತ ತಜ್ಞರ ಸಮಿತಿಯು ಯೋಜನೆಯು ಅನುಷ್ಠಾನಗೊಳ್ಳಲಿರುವ ಸ್ಥಳಗಳಿಗೆ ಭೇಟಿ ನೀಡಿ ಒಂದು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದೆ.

ಪ್ರಾಧಿಕಾರದ ನವದೆಹಲಿ ಹಾಗೂ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಪ್ರತಿನಿಧಿಗಳು, ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಬೆಳಗಾವಿಯ ಪ್ರತಿನಿಧಿಗಳನ್ನು ಈ ಸಮಿತಿಯು ಒಳಗೊಂಡಿರಲಿದೆ.

ಕಳಸಾ ನಾಲಾ ತಿರುವು ಯೋಜನೆಗಾಗಿ ಕರ್ನಾಟಕ ಅರಣ್ಯ ಇಲಾಖೆಯು ಸಿದ್ಧಪಡಿಸಿರುವ ವನ್ಯಜೀವಿ ಸಂರಕ್ಷಣಾ ಯೋಜನೆಯು ಸಮಗ್ರವಾಗಿದೆ. ಆದರೆ, ಇನ್ನಷ್ಟು ಉತ್ತಮಪಡಿಸಲು ಅವಕಾಶವಿದೆ. ಉದ್ದೇಶಿತ ಯೋಜನೆಯ ಸ್ವರೂಪ ಹಾಗೂ ಮಹತ್ವವನ್ನು ಪರಿಗಣಿಸಿ ಇನ್ನಷ್ಟು ಸಾಂಸ್ಥಿಕ ಬದಲಾವಣೆಗೆ ಅವಕಾಶವಿದೆ ಎಂದು ಪ್ರಾಧಿಕಾರ ಆದೇಶದಲ್ಲಿ ತಿಳಿಸಿದೆ.

ಈ ಹಿಂದೆ ರಾಜ್ಯ ಸರ್ಕಾರವು ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಕಳಸಾ ನಾಲಾ ತಿರುವು ಯೋಜನೆಯನ್ನು ಕಾರ್ಯಗತಗೊಳಿಸಲು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಒಳಪಡುವ 10.68 ಹೆಕ್ಟೇರ್ ವಿಸ್ತೀರ್ಣದ ಅರಣ್ಯ ಭೂಮಿ ಸೇರಿದಂತೆ ಒಟ್ಟು 26.92 ಹೆಕ್ಟೇರ್‌ ಭೂಮಿಯನ್ನು ಬಿಟ್ಟುಕೊಡುವಂತೆ ಮನವಿ ಸಲ್ಲಿಸಿತ್ತು. 

ಹುಬ್ಬಳ್ಳಿ, ಧಾರವಾಡ, ಕುಂದಗೋಳ ಪಟ್ಟಣ ಹಾಗೂ ಈ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಮಲಪ್ರಭಾ ಜಲಾಶಯದಲ್ಲಿ ನೀರು ಸಂಗ್ರಹಿಸುವುದು ಯೋಜನೆಯ ಉದ್ದೇಶ ಎಂದು ಸರ್ಕಾರ ಪ್ರಸ್ತಾವದಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT