ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ನಾಶ ಆರೋಪ: ನಿಜ ಸಂಗತಿಯೇ ಬೇರೆ: ಕೇಜ್ರಿವಾಲ್‌

Last Updated 15 ಏಪ್ರಿಲ್ 2023, 22:45 IST
ಅಕ್ಷರ ಗಾತ್ರ

ನವದೆಹಲಿ:‘ ಸಿಬಿಐ ಹಾಗೂ ಇ.ಡಿ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸಿವೆ. ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರು 14 ಮೊಬೈಲ್‌ ಫೋನ್‌ಗಳನ್ನು ನಾಶ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸುತ್ತಿದೆ. ಆದರೆ, ನಿಜ ಸಂಗತಿ ಬೇರೆಯೇ ಇದೆ’ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದರು.

‘14 ಫೋನ್‌ಗಳ ಪೈಕಿ, ನಾಲ್ಕು ಫೋನ್‌ಗಳು ಇ.ಡಿ, ಒಂದು ಫೋನ್‌ ಸಿಬಿಐ ಬಳಿ ಇದೆ. ಉಳಿದ ಮೊಬೈಲ್‌ ಫೋನ್‌ಗಳು ಸಕ್ರಿಯವಾಗಿದ್ದು, ಪಕ್ಷದ ಕಾರ್ಯಕರ್ತರು ಬಳಸುತ್ತಿದ್ದಾರೆ. ಸಿಬಿಐ ಹಾಗೂ ಇ.ಡಿ.ಗೆ ಈ ವಿಷಯ ಗೊತ್ತಿದ್ದರೂ, ಕೋರ್ಟ್‌ಗೆ ಸುಳ್ಳು ಅಫಿಡವಿಟ್ ಸಲ್ಲಿಸಿವೆ’ ಎಂದು ಟೀಕಿಸಿದರು.

‘₹ 100 ಕೋಟಿ ಲಂಚ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಇಷ್ಟೊಂದು ಹಣ ಎಲ್ಲಿದೆ’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

‘ಲಂಚವಾಗಿ ಪಡೆದ ಹಣವನ್ನು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯನ್ನು ಒದಗಿಸಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಿಬಿಐ ಪ್ರಶ್ನಿಸಿದೆ. ಆದರೆ, ಅವರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ, ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.

‘ಕಳೆದ ತಿಂಗಳು ವಿಧಾನಸಭೆ ಅಧಿವೇಶನದ ವೇಳೆ ನಾನು ಭ್ರಷ್ಟಾಚಾರ ಕುರಿತು ಮಾತನಾಡಿದ್ದೆ. ಹೀಗಾಗಿ, ತನಿಖಾ ಸಂಸ್ಥೆಗಳು ನಡೆಯುವ ವಿಚಾರಣೆ ಎದುರಿಸುವುದಕ್ಕೆ ಸಂಬಂಧಿಸಿ, ಮುಂದಿನ ಸರದಿ ನನ್ನದೇ ಎಂಬುದು ನನಗೆ ಕೆಲವರು ತಿಳಿಸಿದ್ದರು’ ಎಂದೂ ಕೇಜ್ರಿವಾಲ್‌ ಹೇಳಿದರು.

ಬಿಗಿ ಭದ್ರತೆ: ಸಮನ್ಸ್‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ವಿಚಾರಣೆಗೆ ಭಾನುವಾರ ಹಾಜರಾಗಲಿದ್ದು, ಸಿಬಿಐ ಕಚೇರಿ ಬಳಿ ಭಾರಿ ಪೊಲೀಸ್‌ ಭದ್ರತೆ ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರೆ ಸೇನಾ ಪಡೆ ಸೇರಿದಂತೆ 1,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಮ್‌ ಆದ್ಮಿ ಪಕ್ಷದ ಕಚೇರಿ ಬಳಿಯೂ ಪೊಲೀಸರನ್ನು ನಿಯೋಜಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಶಕ್ತಿ ಪ್ರದರ್ಶನ: ಸಿಬಿಐ ಕಚೇರಿಗೆ ಭಾನುವಾರ ತೆರಳಲಿರುವ ಅರವಿಂದ ಕೇಜ್ರಿವಾಲ್‌ ಅವರಿಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌, ದೆಹಲಿ ಸಂಪುಟದ ಎಲ್ಲ ಸಚಿವರು ಹಾಗೂ ಪಕ್ಷದ ರಾಜ್ಯಸಭಾ ಸದಸ್ಯರು ಸಾಥ್‌ ನೀಡಲಿದ್ದಾರೆ. ಈ ಮೂಲಕ ಅವರು ಶಕ್ತಿ ಪ್ರದರ್ಶನ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಿ: ಬಿಜೆಪಿ ಸವಾಲು

‘ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮನ್ಸ್‌ ಜಾರಿಗೊಳಿಸಿದ ನಂತರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನಡುಕ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹೆದರುವ ಕಾರಣ ಇಲ್ಲ ಎನ್ನುವುದಾದರೆ ಕೇಜ್ರಿವಾಲ್ ಅವರು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿ’ ಎಂದು ಬಿಜೆಪಿ ಶನಿವಾರ ಸವಾಲು ಹಾಕಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ, ಸಿಬಿಐ ಸಮನ್ಸ್ ನೀಡಿದ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್‌ ನಡೆಯನ್ನು ಖಂಡಿಸಿದರು.

ಈ ಹಿಂದೆ, ಭ್ರಷ್ಟಾಚಾರ ವಿಷಯವಾಗಿ ವಿವಿಧ ಪಕ್ಷಗಳ ಮುಖಂಡರ ವಿರುದ್ಧ ಕೇಜ್ರಿವಾಲ್ ದಾಳಿ ಮಾಡಿದ್ದನ್ನು ಪ್ರಸ್ತಾಪಿಸಿದ ಭಾಟಿಯಾ, ‘ಈಗ ತಮ್ಮ ವಿರುದ್ಧವೇ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುವ ಮೂಲಕ ಸಂಶಯಗಳನ್ನು ನಿವಾರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT