ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ED ಸಮನ್ಸ್‌ಗೆ ಭಯದಿಂದ ನಡುಗುತ್ತಿರುವ ಕೇಜ್ರಿವಾಲ್: ಬಿಜೆಪಿ ಆರೋಪ

Published 3 ಜನವರಿ 2024, 10:54 IST
Last Updated 3 ಜನವರಿ 2024, 10:54 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿಯ ಅಬಕಾರಿ ನೀತಿಯಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆಯಲ್ಲಿ ತಾವೇ ಪ್ರಮುಖ ಸೂತ್ರದಾರಿ ಎಂಬುದನ್ನು ಅರಿತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯ (ED) ನೀಡಿರುವ ನೋಟಸ್‌ಗೆ ಬೆದರಿ ನಡಗುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಮೂರನೇ ಬಾರಿ ನೋಟಿಸ್ ಜಾರಿ ಮಾಡಿದ್ದು, ಅದು ‘ಕಾನೂನು ಬಾಹಿರ’ ಎಂದು ಕೇಜ್ರಿವಾಲ್ ಹೇಳಿ ವಿಚಾರಣೆಗೆ ಗೈರಾಗಿದ್ದಾರೆ. ಇದಕ್ಕೆ ಬಿಜೆಪಿ ಕುಹಕವಾಡಿದೆ.

‘ಅಪ್ರಮಾಣಿಕ ಹಾಗೂ ದುಷ್ಟ ಅರವಿಂದ ಕೇಜ್ರಿವಾಲ್ ಅವರು ಈಗ ಭಯದಿಂದ ನಡುಗುತ್ತಿದ್ದಾರೆ. ಇ.ಡಿ. ನೀಡುತ್ತಿರುವ ಒಂದರ ಹಿಂದೊಂದು ನೋಟಿಸ್‌ಗೆ ಬೆದರಿ ಅದರುತ್ತಿದ್ದಾರೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕಟುವಾಗಿ ಟೀಕಿಸಿದ್ದಾರೆ.

‘ಕೇಜ್ರಿವಾಲ್ ಭಯಭೀತರಾಗಿದ್ದಾರೆ ಎಂಬುದನ್ನು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಈ ಪ್ರಕರಣದಲ್ಲಿ ಅವರ ಬಂಧನ ಖಂಡಿತಾ. ಜತೆಗೆ ಅಕ್ರಮದ ಸೂತ್ರಧಾರ ಅವರೇ ಆಗಿರುವುದರಿಂದ ಇ.ಡಿ. ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿಲ್ಲ. ಇದರಿಂದಾಗಿ ಅವರು ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆಯೊಂದು ಜಾರಿಗೊಳಿಸಿದ ನೋಟಿಸ್‌ ಹಿಂಪಡೆಯಲು ಆದೇಶಿಸಿದ ಪ್ರಕರಣ ಸ್ವಾತಂತ್ರ್ಯ ಭಾರತದಲ್ಲಿ ನಡೆದದ್ದು ಇದೇ ಮೊದಲು. ಆದರೆ ಭ್ರಷ್ಟ ಮತ್ತು ದುಷ್ಟ ಅರವಿಂದ ಕೇಜ್ರಿವಾಲ್, ತನ್ನ ವಿರುದ್ಧ ಹೊರಡಿಸಿರುವ ನೋಟಿಸ್‌ ಹಿಂಪಡೆಯಲು ಆದೇಶಿಸಿದ್ದಾರೆ. ಆದರೆ ಕಾನೂನಿಗಿಂತ ಯಾರೊಬ್ಬರೂ ಮೇಲಿಲ್ಲ. ಆದರೆ ಭ್ರಷ್ಟಾಚಾರದ ವಿರುದ್ಧ ತನಿಖಾ ಸಂಸ್ಥೆಗೆ ಕಾನೂನು ಕ್ರಮ ಕೈಗೊಳ್ಳುವ ಎಲ್ಲಾ ಅಧಿಕಾರಗಳೂ ಇವೆ’ ಎಂದು ಭಾಟಿಯಾ ಹೇಳಿದ್ದಾರೆ.

‘ಒಂದೊಮ್ಮೆ ಕೇಜ್ರಿವಾಲ್ ಅವರಿಗೆ ನೀಡಿರುವ ನೋಟಿಸ್‌ ರಾಜಕೀಯ ಪ್ರೇರಿತ ಎಂದಾದರೆ, ಅವರು ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಸತ್ಯ ಅರಿತಿರುವ ಕೇಜ್ರಿವಾಲ್‌, ಅಂಥ ಧೈರ್ಯ ತೋರುತ್ತಿಲ್ಲ. ಕೈಗೆ ಬೇಡಿ ಬೀಳುವ ಸಮಯ ಹತ್ತಿರವಿದೆ ಎಂದು ಅರಿತಿರುವ ಕೇಜ್ರಿವಾಲ್ ಅವರ ಇಂಥ ನಾಟಕಗಳು ಅವರಿಗೆ ಯಾವುದೇ ನೆರವು ತಂದುಕೊಡವು’ ಎಂದಿದ್ದಾರೆ.

‘ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಇದೇ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿದ್ದು, ಇವರು ಕೇಜ್ರಿವಾಲ್ ಅವರ ಕೈಗೊಂಬೆಗಳಾಗಿದ್ದಾರೆ. ಭಾರತದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಾಗಿ ಒಂದು ಕಾಲದಲ್ಲಿ ಕೇಜ್ರಿವಾಲ್ ಹೇಳುತ್ತಿದ್ದರು. ಆದರೆ ಈಗ ಅವರೇ ಭ್ರಷ್ಟಾಚಾರದ ಕ್ರಿಮಿಯಾಗಿದ್ದಾರೆ. ಕಾನೂನಿಗಿಂತ ತಾನು ಶ್ರೇಷ್ಠ ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಕಿಡಿಯಾಡಿದ್ದಾರೆ.

ಲೋಕಸಭೆ ಚುನಾವಣಾ ಪ್ರಚಾರದಿಂದ ಕೇಜ್ರಿವಾಲ್ ಅವರನ್ನು ದೂರವಿಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇ.ಡಿ. ಅಸ್ತ್ರ ಬಳಸುತ್ತಿದೆ ಎಂಬ ಎಎಪಿ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾಟಿಯಾ, ‘ತನಿಖೆ ಕೈಗೊಂಡಿರುವ ಸಂಸ್ಥೆಯು ಭ್ರಷ್ಟಾಚಾರಿಗಳನ್ನು ಬಯಲಿಗೆಳೆಯುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಜನರ ಬೆವರಿನ ಹಣದ ಲೆಕ್ಕವನ್ನು ಸಂಸ್ಥೆ ಕೇಳುತ್ತಿದೆಯಷ್ಟೇ’ ಎಂದಿದ್ದಾರೆ.

‘ಒಂದೊಮ್ಮೆ ಅವರು ಯಾವುದೇ ಅಪ್ರಾಮಾಣಿಕತೆ ತೋರಿಲ್ಲ ಎಂದಾದರೆ, ಭಯಪಡುತ್ತಿರುವುದೇಕೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಿ ಉತ್ತರ ಹೇಳಬಹುದು. ಆದರೆ ಈ ಪ್ರಕರಣದಲ್ಲಿ ಕೇಜ್ರಿವಾಲ್ ನಡೆ ಕುರಿತು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಮೌನ ವಹಿಸಿರುವುದೇಕೆ’ ಎಂದು ಪ್ರಶ್ನಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದೆ. ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಮುಕ್ತ ವಾತಾವರಣ ಕಲ್ಪಿಸಲಾಗಿದೆ’ ಎಂದು ಭಾಟಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT