ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗೆ ಅರವಿಂದ ಕೇಜ್ರಿವಾಲ್‌ ಗೈರು: ಪ್ರಶ್ನಾವಳಿಗೆ ಕೋರಿಕೆ

ದೆಹಲಿ ಮುಖ್ಯಮಂತ್ರಿ ಬಂಧಿಸಲು ಪಿತೂರಿ–ಎಎಪಿ: ಭ್ರಷ್ಟಚಾರಿಗೆ ಕೈಕೋಳ–ಬಿಜೆಪಿ
Published 3 ಜನವರಿ 2024, 15:24 IST
Last Updated 3 ಜನವರಿ 2024, 15:24 IST
ಅಕ್ಷರ ಗಾತ್ರ

ನವದೆಹಲಿ : ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಮೂರನೇ ಬಾರಿ ಸಮನ್ಸ್‌ ಜಾರಿಗೊಳಿಸಿದ್ದರೂ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರವೂ ಹಾಜರಾಗಲಿಲ್ಲ.

ತನಿಖೆಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಕಳುಹಿಸಿಕೊಡುವಂತೆ ಕೋರಿ ತನಿಖಾ ಸಂಸ್ಥೆಗೆ ಕೇಜ್ರಿವಾಲ್‌ ಪತ್ರ ಬರೆದಿದ್ದಾರೆ.

‘ರಾಜ್ಯಸಭೆಯ ಚುನಾವಣೆ ಹಾಗೂ ಗಣರಾಜ್ಯೋತ್ಸವದ ಸಿದ್ಧತೆಯಲ್ಲಿ ಕಾರ್ಯನಿರತನಾಗಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಸ್ಪಷ್ಟತೆ ಸಿಗದಾಗಿದೆ. ಪ್ರಶ್ನಾವಳಿಯನ್ನು ಕಳುಹಿಸಿದರೆ ಉತ್ತರಿಸುವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದ ಜತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.3ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಇ.ಡಿ ಸಮನ್ಸ್ ನೀಡಿತ್ತು. ಈ ಹಿಂದೆಯೂ 2023ರ ನ.2 ಮತ್ತು ಡಿ.21ರಂದು ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಮೂರು ಬಾರಿಯೂ ಕೇಜ್ರಿವಾಲ್‌ ಅವರು ಹಾಜರಾಗಿಲ್ಲ.

ಈ ಬೆಳವಣಿಗೆಯು ಎಎಪಿ ಹಾಗೂ ಬಿಜೆಪಿ ನಡುವೆ ಆರೋಪ–ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ.

‘ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್‌ ಅವರು ಪ್ರಚಾರ ಮಾಡದಂತೆ ತಡೆಯಲು ಪದೇ ಪದೇ ಸಮನ್ಸ್‌ ನೀಡಲಾಗುತ್ತಿದೆ. ಕೇಜ್ರಿವಾಲ್‌ ಅವರನ್ನು ಬಂಧಿಸಲು ಪಿತೂರಿ ನಡೆದಿದೆ’ ಎಂದು ಆಮ್‌ ಆದ್ಮಿ ಪಕ್ಷವು ಆರೋಪಿಸಿದೆ. ‘ಸತ್ಯ ಹೊರಬರುವುದು ಕೇಜ್ರಿವಾಲ್‌ ಅವರಿಗೆ ಬೇಕಾಗಿಲ್ಲ’ ಎಂದು ಬಿಜೆಪಿ ತಿರುಗೇಟು ನೀಡಿದೆ.

‘ತನಿಖೆಗೆ ಸಹಕರಿಸುವುದಾಗಿ ಕೇಜ್ರಿವಾಲ್ ಹೇಳಿದ್ದರೂ, ಬಂಧಿಸುವ ಉದ್ದೇಶದಿಂದಲೇ ಇ.ಡಿ ಸಮನ್ಸ್ ಹೊರಡಿಸಿದೆ. ಚುನಾವಣೆಗೆ ಮುನ್ನವೇ ಏಕೆ ನೋಟಿಸ್‌ ಕೊಡುತ್ತಿದೆ’ ಎಂದು ಎಎಪಿ ಪ್ರಶ್ನಿಸಿದೆ.

ದೆಹಲಿಯ ಸಚಿವರಾದ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿ ನಡೆಸಿ ಇ.ಡಿ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಾಕ್ಷಿಯಾಗಿಯೇ ಅಥವಾ ಆರೋಪಿಯಾಗಿ ಸಮನ್ಸ್‌ ನೀಡಲಾಗಿದೆಯೇ ಎನ್ನುವುದನ್ನು ತಿಳಿಸಿಲ್ಲ’ ಎಂದಿದ್ದಾರೆ.

ರಾಜಕೀಯ ಪ್ರತೀಕಾರದ ಕ್ರಮವಿದು. ಎಎಪಿ ಇಂತಹ ಸಮನ್ಸ್‌ಗಳಿಗೆ ಹೆದರುವುದಿಲ್ಲ. ಬಿಜೆಪಿ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಇ.ಡಿ ಸಿಬಿಐ ಅನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ.
–ಅತಿಶಿ, ದೆಹಲಿ ಸಚಿವೆ
ದೇಶದಲ್ಲಿ ಭ್ರಷ್ಟರ ಆಡಳಿತದ ಕಾಲ ಮುಗಿದಿದೆ. ಅವರಿಗಿರುವ ಏಕೈಕ ಸ್ಥಳ ಜೈಲು. ಭ್ರಷ್ಟರನ್ನು ಕಾನೂನಿನ ಪ್ರಕಾರ ಶಿಕ್ಷಿಸುವುದೇ ಮೋದಿ ಆಡಳಿತದ ದೃಢ ಸಂಕಲ್ಪವಾಗಿದೆ.
–ಗೌರವ್ ಭಾಟಿಯಾ, ಬಿಜೆಪಿ ರಾಷ್ಟ್ರೀಯ ವಕ್ತಾರ

’ಮೋದಿ ಆಡಳಿತದಲ್ಲಿ ಭ್ರಷ್ಟರಿಗೆ ಶಿಕ್ಷೆ‘

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಇ.ಡಿ ವಿಚಾರಣೆಗೆ ಹಾಜರಾಗದಿರುವುದರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಪ್ರತಿಯೊಬ್ಬ ಭ್ರಷ್ಟ ರಾಜಕಾರಣಿಗೂ ಶಿಕ್ಷೆಯಾಗಲಿದೆ ಎಂದಿದೆ.

‘ರಾಜಕೀಯ ಸೇಡಿನ ಕ್ರಮವಿದು ಎಂದು ಕೇಜ್ರಿವಾಲ್ ಹೇಳುವುದಾದರೆ ಇದೂವರೆಗೂ ನ್ಯಾಯಾಲಯಕ್ಕೆ ಏಕೆ ಹೋಗಿಲ್ಲ’ ಎಂದು ಪ್ರಶ್ನಿಸಿರುವ ಬಿಜೆಪಿಯು ‘ಇಂತಹ ನಾಟಕ ಹೆಚ್ಚು ದಿನ ನಡೆಯಲ್ಲ. ಕೈಕೋಳ ತಮ್ಮ ಹತ್ತಿರವೇ ಬಂದಿದೆ ಎಂಬುದು ಅವರಿಗೆ ಗೊತ್ತಾಗಿದೆ’ ಎಂದು ತಿಳಿಸಿದೆ.

‘ಮೋದಿ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟಿದೆ. ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಜರುಗಿಸಲು ತನಿಖಾ ಸಂಸ್ಥೆಗಳಿಗೆ ಮುಕ್ತ ಅಧಿಕಾರ ಕೊಟ್ಟಿದೆ. ಕಾನೂನಿನ ಶಕ್ತಿ ಹಾಗೂ ಜನರ ನಂಬಿಕೆಯು ಕೇಂದ್ರದ ತನಿಖಾ ಸಂಸ್ಥೆಗಳೊಟ್ಟಿಗಿದೆ’ ಎಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT