ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್‌ ಅಗ್ನಿ ಅವಘಡ: ಮೃತ ಕೇರಳೀಯರ ಕುಟುಂಬಗಳಿಗೆ ₹5 ಲಕ್ಷ ನೆರವು

Published 13 ಜೂನ್ 2024, 7:27 IST
Last Updated 13 ಜೂನ್ 2024, 7:27 IST
ಅಕ್ಷರ ಗಾತ್ರ

ತಿರುವನಂತಪುರಂ: ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಕೇರಳದ ಮೂಲದ ನಾಗರಿಕರ ಕುಟುಂಬಗಳಿಗೆ ತಲಾ ₹5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಇಲ್ಲಿನ (ಕೇರಳ) ಸರ್ಕಾರ ಗುರುವಾರ ಹೇಳಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಅಧಿಕೃತ ಮಾಹಿತಿ ಪ್ರಕಾರ ಅವಘಡದಲ್ಲಿ ಕೇರಳದ 19 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ₹4 ಲಕ್ಷ ಆರ್ಥಿಕ ನೆರವು ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ. ಅಲ್ಲದೇ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ತಕ್ಷಣವೇ ಕುವೈತ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ.

ಪ್ರಮುಖ ಉದ್ಯಮಿಗಳಾದ ಎಂ.ಎ ಯೂಸುಫ್ ಅಲಿ ಮತ್ತು ರವಿ ಪಿಳ್ಳೈ ಅವರು ಅಗ್ನಿ ಅವಘಡದಲ್ಲಿ ಮೃತಪಟ್ಟ ಕೇರಳೀಯರ ಕುಟುಂಬಗಳಿಗೆ ಕ್ರಮವಾಗಿ ₹ 5 ಲಕ್ಷ ಮತ್ತು ₹ 2 ಲಕ್ಷ ನೀಡುವುದಾಗಿ ಸಿಎಂಗೆ ತಿಳಿಸಿದ್ದಾರೆ.

ಕುವೈತ್‌ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡದಲ್ಲಿ ಒಂದೇ ಕಂಪನಿಯ 195 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ.

ಅವಘಡದಲ್ಲಿ 49 ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದು, ಅವರೆಲ್ಲ 20ರಿಂದ 50 ವರ್ಷ ವಯಸ್ಸಿನ ನಡುವಿನವರು ಎಂದು ವಿಧಿವಿಜ್ಞಾನ ಇಲಾಖೆಯ ಮಹಾನಿರ್ದೇಶಕ ಮೇಜರ್ ಜನರಲ್ ಇದ್ ಅಲ್–ಒವೈಹಾನ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT