ಕೊಚ್ಚಿ: ಮಲಯಾಳ ಚಿತ್ರೋದ್ಯಮದಲ್ಲಿ ಮಹಿಳೆಯರ ಶೋಷಣೆ ಮತ್ತು ಅವರಿಗೆ ನೀಡಲಾಗುತ್ತಿರುವ ಕಿರುಕುಳ ಕುರಿತು ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಗೆ ಸಂಬಂಧಿಸಿ ಕ್ರಮ ಕೈಗೊಳ್ಳದಿರುವುದು ‘ಆಘಾತಕಾರಿ’ ಎಂದಿರುವ ಕೇರಳ ಹೈಕೋರ್ಟ್, ರಾಜ್ಯ ಸರ್ಕಾರವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.
‘ಕೆಲ ವರ್ಷಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ವರದಿಯಲ್ಲಿನ ವಿಚಾರಗಳ ಕುರಿತು ಆವಾಗಲೇ ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು’ ಎಂದ ಹೈಕೋರ್ಟ್, ‘ಸೂಕ್ತ ಕ್ರಮ ಜರುಗಿಸುವುದಕ್ಕಾಗಿ ವರದಿಯನ್ನು ಕೂಡಲೇ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಸ್ತಾಂತರಿಸುವಂತೆ’ ನಿರ್ದೇಶನ ನೀಡಿತು.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಸಿ.ಎಸ್.ಸುಧಾ ಅವರಿದ್ದ ವಿಶೇಷ ವಿಭಾಗೀಯ ಪೀಠ, ‘ಇಷ್ಟು ದಿನಗಳ ಕಾಲ ರಾಜ್ಯ ಸರ್ಕಾರ ಸುಮ್ಮನೆ ಇದ್ದದ್ದು ಏಕೆ’ ಎಂದು ಪ್ರಶ್ನಿಸಿತು.
‘ಮಲಯಾಳ ಚಿತ್ರೋದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಮಹಿಳೆಯರು ಸಾಮಾಜಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ’ ಎಂದು ಪ್ರಶ್ನಿಸಿದ ಪೀಠ, ‘ಈ ವಿಚಾರ ಕುರಿತು ಸಮಗ್ರವಾದ ಶಾಸನ ರೂಪಿಸುವ ಅಗತ್ಯ ಇದೆ’ ಎಂದು ಪ್ರತಿಪಾದಿಸಿದೆ.
ತಾನು ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿತು.
ಹೈಕೋರ್ಟ್ ಹೇಳಿದ್ದೇನು?
* ನ್ಯಾ.ಹೇಮಾ ನೇತೃತ್ವದ ಸಮಿತಿ ವರದಿ ಸಲ್ಲಿಸಿ ನಾಲ್ಕು ವರ್ಷಗಳು ಕಳೆದ ನಂತರ ಸರ್ಕಾರ ಕ್ರಮಕ್ಕೆ ಮುಂದಾಗಿದೆ * ನ್ಯಾ.ಹೇಮಾ ಸಮಿತಿ ವರದಿ ಆಧರಿಸಿ ಎಸ್‌ಐಟಿ ಕ್ರಮ ತೆಗೆದುಕೊಳ್ಳಬಹುದು. ಎಸ್‌ಐಟಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯ ಪರಿಶೀಲನೆ ನಡೆಸುವುದು * ಸಂತ್ರಸ್ತೆಯರ ಕುರಿತ ವಿವರಗಳನ್ನು ಎಸ್‌ಐಟಿ ಬಹಿರಂಗಪಡಿಸಬಾರದು * ಸಂತ್ರಸ್ತೆಯರು ನೀಡಿರುವ ದೂರುಗಳ ವಿಚಾರವಾಗಿ ಎಸ್‌ಐಟಿ ಅವಸರದಲ್ಲಿ ಕ್ರಮ ಜರುಗಿಸಬಾರದು * ಸುದ್ದಿ ಪ್ರಕಟಣೆ/ಪ್ರಸಾರ ನಿರ್ಬಂಧಿಸಿ ಆದೇಶ ಹೊರಡಿಸುವುದಿಲ್ಲ. ಈ ಕುರಿತು ಮಾಧ್ಯಮಗಳೇ ಸ್ವಯಂ ನಿಯಂತ್ರಣ ಹೊಂದಬೇಕು