ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ ಶಾಲೆಗಳಲ್ಲಿ ಎ.ಐ. ಪಾಠ

Published 30 ಮೇ 2024, 14:00 IST
Last Updated 30 ಮೇ 2024, 14:00 IST
ಅಕ್ಷರ ಗಾತ್ರ

ತಿರುವನಂತಪುರ: ಶಿಕ್ಷಣದ ಆಧುನೀಕರಣಕ್ಕೆ ಮಹತ್ವದ ಹೆಜ್ಜೆ ಇರಿಸಿರುವ ಕೇರಳವು, ಶಾಲಾ ಪಠ್ಯಪುಸ್ತಕಗಳಲ್ಲಿ ಕೃತಕ ಬುದ್ಧಿಮತ್ತೆಯ (ಎ.ಐ) ವಿಷಯ ಸೇರ್ಪಡೆಗೊಳಿಸಲು ನಿರ್ಧರಿಸಿದೆ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಪಠ್ಯಕ್ರಮದ ಭಾಗವಾಗಿ ಎ.ಐ. ಕಲಿಕಾ ಮಾದರಿಯನ್ನು ಅಳವಡಿಸುವ ಯೋಜನೆಯನ್ನು ರಾಜ್ಯ ಸರ್ಕಾರವು ಅನಾವರಣಗೊಳಿಸಿದೆ.

ಸರ್ಕಾರದ ಈ ನಡೆಯಿಂದಾಗಿ ರಾಜ್ಯದ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗಲಿದೆ. ಅವರಿಗೆ ಬರಲಿರುವ ಶೈಕ್ಷಣಿಕ ವರ್ಷದಲ್ಲಿ ಎ.ಐ. ಕುರಿತು ಕಲಿಯಲು ಸಾಧ್ಯವಾಗಲಿದೆ ಎಂದು ಕೇರಳ ಶೈಕ್ಷಣಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ (ಕೈಟ್) ಸಂಸ್ಥೆಯ ಪ್ರಕಟಣೆ ಹೇಳಿದೆ.

ಮನುಷ್ಯನ ಮುಖಭಾವವನ್ನು ಗುರುತಿಸುವ ಸಾಮರ್ಥ್ಯದ ಎ.ಐ. ಪ್ರೋಗ್ರಾಮ್‌ ರಚಿಸುವ ಚಟುವಟಿಕೆಯು ‘ಕಂಪ್ಯೂಟರ್ ವಿಷನ್’ ಹೆಸರಿನ ಅಧ್ಯಾಯದಲ್ಲಿ ಇರಲಿದೆ ಎಂದು ಕೈಟ್‌ ಸಿಇಒ ಅನ್ವರ್ ಸಾದತ್ ತಿಳಿಸಿದ್ದಾರೆ.

‘ಮನುಷ್ಯದ ಮುಖದಲ್ಲಿ ವ್ಯಕ್ತವಾಗುವ ಗರಿಷ್ಠ ಏಳು ಭಾವನೆಗಳನ್ನು ಗುರುತಿಸುವ ಸಾಮರ್ಥ್ಯವನ್ನು ಈ ಪ್ರೋಗ್ರಾಮ್‌ ಹೊಂದಿರಲಿದೆ. ತರಗತಿಯೊಂದರ ಎಲ್ಲ ವಿದ್ಯಾರ್ಥಿಗಳು ಎ.ಐ. ಬಗ್ಗೆ ಕಲಿಯುವ ಸಮಾನ ಅವಕಾಶವು ಲಭ್ಯವಾಗುತ್ತಿರುವುದು ದೇಶದಲ್ಲಿ ಇದೇ ಮೊದಲು’ ಎಂದು ಅವರು ಹೇಳಿದ್ದಾರೆ.

ಹೊಸ ಶೈಕ್ಷಣಿಕ ವರ್ಷವು ಜೂನ್‌ 3ರಿಂದ ಆರಂಭವಾಗಲಿದೆ. ಮಲಯಾಳ, ಇಂಗ್ಲಿಷ್, ತಮಿಳು ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುವ 1, 3, 5 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಐಸಿಟಿ ಪಠ್ಯಪುಸ್ತಕ ಇರಲಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಆಲೋಚನೆ, ವಿಶ್ಲೇಷಣಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸುವುದಕ್ಕೆ ಪಠ್ಯಕ್ರಮ ಚೌಕಟ್ಟು ಒತ್ತು ನೀಡುತ್ತದೆ.

ಎ.ಐ. ವಿಚಾರವಾಗಿ 80 ಸಾವಿರ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸವನ್ನು ಕೈಟ್‌ ಆರಂಭಿಸಿದೆ. ಇದುವರೆಗೆ 20,120 ಶಿಕ್ಷಕರು ಈ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT